ಕೂಡಿಗೆ, ಅ. ೧೭: ಜಿಲ್ಲೆಯ ಕನ್ನಡ ಸಿರಿ ಬಳಗದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಸಾಹಿತಿಗಳನ್ನು ಪರಿಗಣಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಕುಶಾಲನಗರದಲ್ಲಿ ಬಳಗದ ವತಿಯಿಂದ ಮನವಿ ನೀಡಲಾಯಿತು.
ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ೧೯೬೬ರಲ್ಲಿ ಪ್ರಾರಂಭಗೊAಡು ಇಂದಿಗೆ ೫೯ ವರ್ಷಗಳು ಕಳೆದರೂ ಕೊಡಗಿನಲ್ಲಿ ವಾಸವಿರುವ ನೈಜ ಸಾಹಿತಿಗಳು ರಾಜ್ಯೋತ್ಸವ ಪ್ರಶಸ್ತಿಯಿಂದ ವಂಚಿತರಾಗುತ್ತಲೇ ಬಂದಿದ್ದಾರೆ.
ಕೊಡಗಿನಲ್ಲೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ತಮ್ಮ ಬರವಣಿಗೆ ಶೈಲಿಯ ಮುಖಾಂತರ ಅನುವಾದ ಸಾಹಿತ್ಯದಲ್ಲೂ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟವರೂ ಸಹಾ ಕೊಡಗಿನವರೇ ಎಂಬುದು ಹೆಮ್ಮೆ.
ಆದರೂ ರಾಜ್ಯೋತ್ಸವ ಪುರಸ್ಕೃತ ಪ್ರದಾನ ಸಂದರ್ಭದಲ್ಲಿ ಇದುವರೆಗೂ ಸೂಕ್ತ ಸ್ಥಾನಮಾನ ಕೊಡಗಿಗೆ ದೊರೆತಿಲ್ಲ. ಈ ಬಾರಿಯಾದರೂ ಕೊಡಗಿನ ನೈಜ ಸಾಹಿತಿಗಳಿಗೆ ರಾಜ್ಯೋತ್ಸವ ಪುರಸ್ಕಾರದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮುಖೇನ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಬಳಗದ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ನರೇಂದ್ರ ರಮೇಶ್ ಸೇರಿದಂತೆ ಇನ್ನಿತರರು ಇದ್ದರು.