ನಾಪೋಕ್ಲು, ಅ. ೧೭: ಇಲ್ಲಿನ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವತಿಯಿಂದ ಶಾಲಾ ಸಭಾಂಗಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಮಕ್ಕಳ ಸಂತೆಯನ್ನು ಎಕ್ಸೆಲ್ ಶಾಲೆಯ ಸ್ಥಾಪಕಾಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಪ್ರಿಯಾಂಕ ಮಾತನಾಡಿ ಮಕ್ಕಳ ಕಲಿಕೆಗೆ ಪೂರಕವಾಗಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ, ಸೃಜನಶೀಲತೆ, ಗಣಿತ ಲೆಕ್ಕಾಚಾರಗಳನ್ನು ಕಲಿತುಕೊಳ್ಳಲು ಸಹಕಾರಿಯಾಗಲಿದೆ ಎಂದರು

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೇತಾಜಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಸಿ.ಎಸ್ ಸುರೇಶ ಮಾತನಾಡಿ ಸಂತೆ ಎಂದರೆ ಗದ್ದಲ, ಕಲರವ, ಎಲ್ಲಾ ರೀತಿಯ ವಸ್ತುಗಳು ದೊರಕುವ ಸ್ಥಳ. ಅಂತಹ ಒಂದು ವಾತಾವರಣವನ್ನು ಶಿಕ್ಷಕರು ಈ ಶಾಲೆಯಲ್ಲಿ ಆಯೋಜಿಸಿದ್ದು, ಮಕ್ಕಳ ಕಲಿಕೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ವ್ಯವಹಾರ ಜ್ಞಾನ, ಬದುಕುವ ಕಲೆ ವೃದ್ಧಿಸಲಿದೆ ಎಂದರು.

ಮಕ್ಕಳ ಸಂತೆಯಲ್ಲಿ ಆರರಿಂದ ೧೦ನೇ ತರಗತಿವರೆಗಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತರಹೇವಾರಿ ತಿಂಡಿ ತಿನಿಸುಗಳು, ತರಕಾರಿಗಳು, ಹಣ್ಣು ಹಂಪಲುಗಳನ್ನು ಪ್ರದರ್ಶಿಸಿದರು ಮತ್ತು ಮಾರಾಟ ಮಾಡಿದರು.

ಶಾಲೆ ನಿರ್ದೇಶಕರಾದ ಶರತ್, ಭವ್ಯ, ವಿದ್ಯಾ ಸುರೇಶ್, ಮುಖ್ಯ ಶಿಕ್ಷಕ ತಮ್ಮಯ್ಯ, ಶಿಕ್ಷಕ ವೃಂದ, ಪೋಷಕರು ಪಾಲ್ಗೊಂಡಿದ್ದರು.