ಐಗೂರು, ಅ. ೧೭: ಈ ಬಾರಿಯ ಮಳೆಗಾಲವು ಅವಧಿಗಿಂತ ಮೊದಲೇ ಪ್ರಾರಂಭವಾಗಿದ್ದು, ಅವಧಿ ಮುಗಿದರೂ ಮಳೆ ಸುರಿಯುತ್ತಿದ್ದು ಬೆಳೆಗಾರರು, ಮತ್ತು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಸಕಾಲಕ್ಕೆ ಗೊಬ್ಬರ ಹಾಕದೆ ಕಾಫಿಯ ಬೆಳವಣಿಗೆಯು ಕುಂಠಿತಗೊAಡಿದೆ. ದಸರಾ ಹಬ್ಬ ಮುಗಿದು ದೀಪಾವಳಿ ಬರುತ್ತಿದ್ದರೂ ವರುಣನ ಆರ್ಭಟ ನಿಲ್ಲುವಂತೆ ಕಾಣುತ್ತಿಲ್ಲ. ಮಳೆಯ ಜೊತೆ ಗುಡುಗು, ಮಿಂಚು, ಮತ್ತು ಗಾಳಿ ಜೋರಾಗಿ ಬೀಸುತ್ತಿದೆ. ಚೋರನ ಹೊಳೆಯಲ್ಲಿ ಕಡಿಮೆಯಾಗಿದ್ದ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ವರುಣನ ನಾಡು ಸೂರ್ಲಬ್ಬಿಯಲ್ಲಿ ದಾಖಲೆಯ ೩೪೦ ಇಂಚು ಮಳೆಯಾಗಿದ್ದು ಕಾಫಿ, ಏಲಕ್ಕಿ ಫಸಲುಗಳು ಕೊಳೆತು ಉದುರಿ ಹೋಗಿದೆ ಎಂದು ರೈತ ನಾಣ್ಯಪ್ಪ ತಿಳಿಸಿದ್ದಾರೆ. ಮೋಡ ಕವಿದ ವಾತಾವರಣದಲ್ಲಿ ಕಾಫಿ ಹಣ್ಣಿನ ಕೊಯ್ಲಿನ ದಿನಗಳು ಹತ್ತಿರ ಬಂದರೂ ಕಾಫಿ ಪೂರ್ಣವಾಗಿ ಹಣ್ಣಾಗಿರುವುದಿಲ್ಲ. ಐಗೂರಿನಲ್ಲಿ ೭೦, ಗರ್ವಾಲೆಯಲ್ಲಿ ೧೮೦, ಕಿರಗಂದೂರಿನಲ್ಲಿ ೭೫ ಇಂಚುಗಳ ಮಳೆಯಾಗಿದೆ ಎಂದು ಬೆಳೆಗಾರರಾದ ಕೆ.ಪಿ. ಮುತ್ತಪ್ಪ, ಮತ್ತು ಬಾರನ ಪ್ರಮೋದ್ ತಿಳಿಸಿದ್ದಾರೆ. ಕಾಫಿ, ಮೆಣಸು ಉದುರಿ ಹೋಗಿದ್ದು, ಈ ಭಾಗದ ರೈತರು
ಕಾಫಿ ತೋಟಗಳಿಗೆ ಖರ್ಚು ಮಾಡಿದ ಬಂಡವಾಳವು ಕೈಗೆಟುಕುವುದೋ ಎಂಬ ಚಿಂತೆಯಲ್ಲಿದ್ದಾರೆ.