ಮಡಿಕೇರಿ, ಅ. ೧೬: ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂದು ಪ್ರಮುಖರು ಪ್ರತಿಪಾದಿಸಿದರು.
ನಗರದ ರಾಜ್ ದರ್ಶನ್ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಔತಣಕೂಟವನ್ನು ಆಯೋಜಿಸಲಾಗಿತ್ತು. ಗಣ್ಯರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ನಗರಸಭೆ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಮಾತನಾಡಿ, ಪೌರಕಾರ್ಮಿಕರ ತ್ಯಾಗ, ಸೇವಾ ಮನೋಭಾವನೆ ಸದಾ ಸ್ಮರಣೀಯ. ದಸರಾ ಸಂದರ್ಭದಲ್ಲಿ ಅತ್ಯಂತ ಶ್ರಮವಹಿಸಿ ಪೌರಕಾರ್ಮಿಕರು ದುಡಿದಿದ್ದಾರೆ ಎಂದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರು ಪ್ರಧಾನ ಪಾತ್ರ ವಹಿಸಿದ್ದಾರೆ. ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಿಕೊಳ್ಳಲಾಗುವುದಿಲ್ಲ ಎಂದ ಅವರು, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪಿಸಬೇಕೆಂದು ಕರೆ ನೀಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಾತನಾಡಿ, ಪೌರಕಾರ್ಮಿಕ ಸೇವೆ ಸದಾ ಸ್ಮರಣೀಯ. ಸ್ವಚ್ಛ ಸಮಾಜ ನಿರ್ಮಿಸಬೇಕಾದಲ್ಲಿ ಪೌರಕಾರ್ಮಿಕರ ಅನಿವಾರ್ಯತೆ ಅತ್ಯಗತ್ಯ ಎಂದರು.
ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ದಸರಾ ಆಚರಣೆ ಸಂದರ್ಭ ಮಳೆ ಎದುರಾದರೂ ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳಂತೆ ಹಗಲಿರುಳು ಶ್ರಮಿಸಿದ್ದಾರೆ. ಸ್ವಚ್ಛತೆ ವಿಷಯದಲ್ಲಿ ಚ್ಯುತಿ ಬಾರದಂತೆ ಕೆಲಸ ಮಾಡಿದ್ದಾರೆ. ದಸರಾ ಯಶಸ್ವಿಯಾಗಲು ಪೌರಕಾರ್ಮಿಕರು ಕಾರಣಕರ್ತರಾಗಿದ್ದಾರೆ. ದಸರಾ ಮುಕ್ತಾಯದ ನಂತರ ಸ್ವಚ್ಛ ನಗರವಾಗಿ ಮಾಡಿದ ಕೀರ್ತಿ ಪೌರಕಾರ್ಮಿಕರಿಗೆ ಸಲ್ಲುತ್ತದೆ ಎಂದರು.
ಹೋA ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಪೌರಕಾರ್ಮಿಕರಿಂದ ನಗರ ಶುಚಿಯಾಗಿದೆ. ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಪೌರಕಾರ್ಮಿಕರೊಂದಿಗೆ ಕೈ ಜೋಡಿಸಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ದಸರಾ ಮರುದಿನ ಕಸತುಂಬಿ ನಗರವನ್ನು ನೋಡಲಾಗದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಸ್ವಲ್ಪ ಸಮಯದಲ್ಲಿ ಶುಚಿಗೊಳ್ಳಲು ಕಾರಣ ಪೌರಕಾರ್ಮಿಕರು. ನಿಮ್ಮ ಕೆಲಸ ಗುರುತಿಸಬೇಕು. ಪೌರಕಾರ್ಮಿಕರ ನೋವಿಗೆ ಜನ ಸ್ಪಂದಿಸಿ ಬೆಂಬಲವಾಗಿ ನಿಲ್ಲಬೇಕು ಎಂದರು.
ಇದೇ ಸಂದರ್ಭ ಪೌರಕಾರ್ಮಿಕರಾದ ಡಿ. ಲಕ್ಷ್ಮಿ ಹಾಗೂ ಮಡಿಕೇರಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಅವರುಗಳನ್ನು ಸನ್ಮಾನಿಸಲಾಯಿತು.
ನಗರಸಭೆ ಪೌರಾಯುಕ್ತ ರಮೇಶ್, ಖಜಾಂಚಿ ಸಬಿತಾ, ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.