ಮಡಿಕೇರಿ, ಅ. ೧೬ : ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ತಾ. ೧೯ರಂದು ನಗರದ ಕಾವೇರಿ ಹಾಲ್‌ನಲ್ಲಿ ಓಣಾಘೋಷಂ, ಓಣಂ ಸಧ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ಹಾಗೂ ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. ಅಂದು ಬೆಳಿಗ್ಗೆ ಛದ್ಮವೇಷ ಸ್ಪರ್ಧೆ, ಪೂಕಳಂ ಸ್ಪರ್ಧೆ, ಮಾವೇಲಿ ಹಾಗೂ ಚಂಡೆ ವಾದ್ಯದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ತಿರುವಾದಿರ ನೃತ್ಯದ ಬಳಿಕ ಬೆಳಿಗ್ಗೆ ೧೦.೩೦ ಗಂಟೆಗೆ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ. ಕೆ.ವಿ. ಧರ್ಮೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಬಳಿಕ ಓಣಂ ಸಧ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ೪.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಿಲಿದ್ದು, ಟಿ.ಕೆ. ಸುಧೀರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಸಲಹೆಗಾರ ಟಿ.ಆರ್. ವಾಸುದೇವನ್, ಮತ್ತಿತರರು ಭಾಗವಹಿಸಲಿದ್ದಾರೆ. ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವೂ ಜರುಗಲಿದೆ ಎಂದು ಧರ್ಮೇಂದ್ರ ಹಾಗೂ ಸುಧೀರ್ ಮಾಹಿತಿ ನೀಡಿದರು. ಪೂಕಳಂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ ರೂ. ೫ ಸಾವಿರ, ದ್ವಿತೀಯ ಬಹುಮಾನವಾಗಿ ರೂ. ೩ ಸಾವಿರ, ತೃತೀಯ ಬಹುಮಾನವಾಗಿ ರೂ. ೨ ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪುಕುಟ್ಟನ್, ಉಪಾಧ್ಯಕ್ಷ ಪಿ.ವಿ. ವಿಜಯಕುಮಾರ್, ಗೌರವ ಸಲಹೆಗಾರರಾದ ಟಿ.ಆರ್. ವಾಸುದೇವನ್, ಪಿ.ಟಿ. ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು.