ಸಿದ್ದಾಪುರ, ಅ. ೧೬ : ಅಕ್ರಮವಾಗಿ ಬಳಂಜಿ ಮರಗಳ ನಾಟಾಗಳನ್ನು ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಂಡು ಆರೋಪಿಯನ್ನು ಬಂದಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಸಂಚಾರಿ ಪೊಲೀಸ್ ದಳದವರು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬಿಳುಗುಂದ ಗ್ರಾಮದಿಂದ ಅನುಮತಿ ಪಡೆಯದೆ ಅಕ್ರಮವಾಗಿ ಬಳಂಜಿ ಮರಗಳನ್ನು ಕಡಿದು ನಾಟಾಗಳನ್ನು ಸ್ವರಾಜ್ ಮಜ್ದಾ ವಾಹನದಲ್ಲಿ ಸಾಗಿಸುತ್ತಿರುವ ಸಂದರ್ಭ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಅರಣ್ಯ ಸಂಚಾರಿ ಪೊಲೀಸ್ ದಳದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮರ ಸಾಗಾಟ ಮಾಡುತ್ತಿದ್ದ ವಾಹನ ತಡೆದು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಹುಂಡಿಯ ನಿವಾಸಿ ಸಕೀರ್ (೩೫) ಎಂಬಾತನನ್ನು ಬಂದಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾ ಚರಣೆಯಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ರಾಘವ ಮತ್ತು ಸಿಬ್ಬಂದಿಗಳು ಹಾಗೂ ವೀರಾಜಪೇಟೆ ತಾಲೂಕು ಅರಣ್ಯ ಸಂಚಾರಿ ಪೊಲೀಸ್ ದಳದ ಸಹಾಯಕ ಠಾಣಾಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.