ಮಡಿಕೇರಿ, ಅ. ೧೬ : ರೈತರಿಗೆ ಸಾಗುವಳಿ ಚೀಟಿ ಹಕ್ಕುಪತ್ರ ಹಾಗೂ ಅಕ್ರಮ ಸಕ್ರಮದಡಿ ಜಮೀನು ಮಂಜೂರು ಮಾಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಆಗ್ರಹಿಸಿದರು.
ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ವಿಷಯ ಪ್ರಸ್ತಾಪಿಸಿದ ಶಾಸಕರು ಕೊಡಗು ಜಿಲ್ಲೆಯ ಸರ್ಕಾರಿ ಪೈಸಾರಿ ಜಮೀನನ್ನು ಸಿ ಮತ್ತು ಡಿ ಜಮೀನೆಂದು ವರ್ಗೀಕರಿಸಿ ಗೊಂದಲಗಳನ್ನು ಸರಿಪಡಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ವಡೆಯನಪುರ ಗ್ರಾಮದ ಸರ್ವೇ ನಂ ೧೨೪/೧ ರಲ್ಲಿ ವಾಸವಿರುವ ೨೦೦ ರಿಂದ ೨೫೦ ಕುಟುಂಬಗಳಿಗೆ ೯೪/ಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕು.
ನಮೂನೆೆ - ೫೭ ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಕಂದಾಯ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.