ಮಡಿಕೇರಿ, ಅ. ೧೬: ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ತಾ.೨೦ರಂದು ಕೊಡಗು ಗೌಡ ಸಮಾಜದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾರಿಕೆ ಪಿ. ದಿನೇಶ್‌ಕುಮಾರ್ ಉದ್ಘಾಟಿಸಲಿದ್ದು, ತಾನು ಅಧ್ಯಕ್ಷತೆ ವಹಿಸಲಿದ್ದೇನೆ. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತರಾದ ನಂಗಾರು ಆರ್. ನಾಣಯ್ಯ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ವಿದ್ಯಾನಿಧಿ ದಾನಿಗಳಾದ ಕಾಫಿ ಬೆಳೆಗಾರರಾದ ತಳೂರು ಯಶೋಧ ಸೋಮಣ್ಣ, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಆನೇರ ಜಾನಕಿ ಮೋಹನ್, ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚೆರಿಯಮನೆ ಬಿ. ರಾಮಚಂದ್ರ, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಿಡ್ಯಮನೆ ದೇವಕ್ಕಿ ಅನುರಾಜ್ ಭಾಗವಹಿಸಲಿದ್ದಾರೆ. ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಅಮೆ ಸಿ. ಸೀತಾರಾಮ್ ಮಾತನಾಡಿ, ಸಂಘದ ಕಟ್ಟಡ ನವೀಕರಣ ಕಾರ್ಯ ನಡೆಯುತ್ತಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದರು. ನಿರ್ದೇಶಕರಾದ ಚೊಕ್ಕಾಡಿ ಎನ್. ಅಪ್ಪಯ್ಯ ಮಾತನಾಡಿ, ಒಳ್ಳೆಯ ಉದ್ದೇಶದೊಂದಿಗೆ ಸಂಘವು ಕಾರ್ಯನಿರ್ವಹಿಸುತ್ತಿದೆ ಎಂದರು. ನಿರ್ದೇಶಕಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಸಂಘದ ಕಟ್ಟಡ ಕಾಮಗಾರಿ ಸುಮಾರು ೪ ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಇದುವರೆಗೆ ಸಂಘದಿAದ ಪ್ರತಿಭಾ ಪುರಸ್ಕಾರ ಪಡೆದವರು ಧನ ಸಹಾಯ ಮಾಡಬೇಕೆಂದು ಕೋರಿದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ಕುಂಭಗೌಡನ ಡಿ. ವಿನೋದ್ ಕುಮಾರ್, ಕಾರ್ಯದರ್ಶಿ ಪೇರಿಯನ ಕೆ. ಉದಯಕುಮಾರ್ ಉಪಸ್ಥಿತರಿದ್ದರು.