ವೀರಾಜಪೇಟೆ, ಅ. ೧೫: ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವೀರಾಜಪೇಟೆ ಪುರಸಭೆ ಅಧ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ ಹೇಳಿದರು.

ಕೊಡಗು ಜಿಲ್ಲಾ ಹೊಟೇಲ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಹಿನ್ನೆಲೆ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ, ವೀರಾಜಪೇಟೆ ಪುರಸಭೆ ಹಾಗೂ ವೀರಾಜಪೇಟೆ ತಾಲೂಕು, ನಗರ ವರ್ತಕರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕು. ಈಗಾಗಲೇ ವೀರಾಜಪೇಟೆ ಪುರಸಭೆ ವತಿಯಿಂದ ಸ್ವಚ್ಛ ನಗರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ. ಸ್ವಚ್ಛತಾ ಜಾಗೃತಿಯಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದರು.

ವೀರಾಜಪೇಟೆ ನಗರ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಸ್ವಚ್ಛ ಪರಿಸರ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ಪಣ ತೊಡಬೇಕು. ನಮ್ಮ ಮನೆಗಳಿಂದಲೇ ಸ್ವಚ್ಛತೆ ಆರಂಭವಾಗಬೇಕು ಎಂದರು.

ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್ನ ಪ್ರಧಾನ ಗುರು ಹಾಗೂ ವ್ಯವಸ್ಥಾಪಕರಾದ ರೆ.ಫಾ. ಜೇಮ್ಸ್ ಡೊಮಿನಿಕ್ ಮಾತನಾಡಿ, ೪ಮೂರನೇ ಪುಟಕ್ಕೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮುಂದಿನ ಪೀಳಿಗೆಗೆ ನಾವು ಪರಿಸರವನ್ನು ಬಳುವಳಿಯಾಗಿ ನೀಡಬೇಕಾಗಿದೆ. ಸಾಮಾಜಿಕ ಪ್ರಜ್ಞೆ ಎಂಬುದು ಪ್ರತಿಯೊಬ್ಬರಲ್ಲೂ ಮೂಡಬೇಕು. ಅದು ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣದ ಕಲ್ಪನೆ ಸಾಕಾರವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಪುರಸಭಾ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಮತೀನ್, ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್ನ ಸಹಾಯಕ ಗುರುಗಳಾದ ಫಾ. ಅಭಿಲಾಷ್, ವೀರಾಜಪೇಟೆ ವರ್ತಕರ ಸಂಘದ ಪದಾಧಿಕಾರಿಗಳು, ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಉಪಸ್ಥಿತರಿದ್ದರು.

ಕಾಲೇಜಿನ ಮುಂಭಾಗದ ಮುಖ್ಯ ರಸ್ತೆಯಿಂದ ಚಿಕ್ಕಪೇಟೆ-ಬೋಯಿಕೇರಿ ಹಾಗೂ ಕೆದಮುಳ್ಳೂರು ರಸ್ತೆಯವರೆಗೂ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಮಾಡಿದರು. ಈ ಸಂದರ್ಭ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಬಿ.ಎನ್. ಶಾಂತಿಭೂಷಣ್, ವೀರಾಜಪೇಟೆ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್, ಸಮಾಜ ಸೇವಕರಾದ ಯೋಗೇಶ್ ನಾಯ್ಡು, ಉಪನ್ಯಾಸಕರುಗಳಾದ ಜೇಮ್ಸ್ ಅಂಟೋನಿ, ವಿಲೀನ ಗೋನ್ಸಾಲ್ವೇಸ್, ಶಶಿಕಲಾ ಹಾಗೂ ಆದಿತ್ಯ, ವೀರಾಜಪೇಟೆ ವರ್ತಕರ ಸಂಘದ ಪದಾಧಿಕಾರಿಗಳು, ಸ್ವಯಂ ಸೇವಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.