ಮಡಿಕೇರಿ, ಅ. ೧೫: ಮಡಿಕೇರಿಯಿಂದ ಬೆಂಗಳೂರಿಗೆ ಮರಗೋಡು ಮೂಲಕ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ಸಂಚಾರ ಆರಂಭಿಸಿದ್ದು, ನೂತನ ಬಸ್ ಸಂಚಾರಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಬಸ್ ಅನ್ನು ಓಡಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇದರ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿ ಮಾಡಿದರು. ಮಡಿಕೇರಿ ಘಟಕದ ವ್ಯವಸ್ಥಾಪಕ ಈರಸಪ್ಪ ಮಾತನಾಡಿ, ನೂತನ ಬಸ್ ಮಡಿಕೇರಿಯಿಂದ ಮಧ್ಯಾಹ್ನ ೨.೩೦ ಗಂಟೆಗೆ ಹೊರಟು ಮರಗೋಡು, ಸಿದ್ದಾಪುರ, ಮಾಲ್ದಾರೆ ಮಾರ್ಗವಾಗಿ ಪಿರಿಯಾಪಟ್ಟಣ, ಹುಣಸೂರು, ಮೈಸೂರು ಮುಖಾಂತರ ಬೆಂಗಳೂರಿಗೆ ರಾತ್ರಿ ೧೦ ಗಂಟೆಗೆ ತಲುಪಲಿದ್ದು ಅದೇ ದಿನ ರಾತ್ರಿ ೧೨.೩೦ ಗಂಟೆಗೆ ಹಿಂತಿರುಗಿ ಮೈಸೂರು, ಹುಣಸೂರು, ಗೋಣಿಕೊಪ್ಪ, ಪಾಲಿಬೆಟ್ಟ, ಸಿದ್ದಾಪುರ ಮರಗೋಡು ಮಾರ್ಗವಾಗಿ ಬೆಳಿಗ್ಗೆ ೭.೩೦ ಗಂಟೆಗೆ ಮಡಿಕೇರಿ ತಲುಪಲಿದೆ ಎಂದು ತಿಳಿಸಿದರು.

ಈ ಸಂದರ್ಭ ಮರಗೋಡು, ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಮರಗೋಡು ಪಂಚಾಯಿತಿ ಪಿ.ಡಿ.ಓ, ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ತಾಲೂಕು ಪಂಚಾಯಿತಿ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.