ವೀರಾಜಪೇಟೆ, ಅ. ೧೫: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡ ಕುಟುಂಬಗಳ ಕೂಲಿ ಕಾರ್ಮಿಕರು ಮುಖ್ಯ ವಾಹಿನಿಗೆ ಬರಬೇಕೆಂದು ಹಲವು ಯೋಜನೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದೊಂದಿಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಗಾಂಧಿ ಸ್ಮೃತಿ ಜಾಥಾ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಜಾ ಕುಶಾಲಪ್ಪ ಅವರು ಮಾತನಾಡಿ, ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಭಾಗದ ಜನರ ಏಳಿಗೆಗಾಗಿ ಸರಕಾರ ಮಾಡುವಂತ ಕಾರ್ಯ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರು ಇಂದು ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಧರ್ಮಸ್ಥಳ ಯೋಜನೆಯಿಂದ ಅನೇಕ ಬಡ ಕುಟುಂಬಗಳು ಅಭಿವೃದ್ಧಿ ಹೊಂದಿರುವುದಾಗಿ ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಉಪಾಧ್ಯಕ್ಷ ಧನಂಜಯ ಮೊಣ್ಣಂಗೇರಿ ಮಾತನಾಡಿ, ಧರ್ಮಸ್ಥಳದಲ್ಲಿ ಪೂಜೆ ಪುನಸ್ಕಾರಗಳು ನಡೆಯುವುದರೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆಯವರು ಮೊದಲು ಬೆಳ್ತಂಗಡಿ ತಾಲೂಕಿನಲ್ಲಿ ಯೋಜನೆಗಳನ್ನು ಪ್ರಾರಂಭಿಸಿದರು. ನಂತರ ರಾಜ್ಯಾದ್ಯಂತ ಯೋಜನೆಗಳನ್ನು ವಿಸ್ತರಿಸಲಾಗಿದ್ದು, ಮದ್ಯಪಾನದಿಂದ ಅನೇಕ ಬಡ ಕುಟುಂಬಗಳು ಸಂಕಷ್ಟದಲ್ಲಿದ್ದ ಕಾರಣ ಅವರ ಬದುಕಿನಲ್ಲಿ ಬೆಳಕು ತರಲು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಮಂದಿ ಮದ್ಯಪಾನದಿಂದ ದೂರ ಉಳಿದಿದ್ದು ಇಂದು ಅವರ ಬದುಕು ಅಭಿವೃದ್ಧಿಯತ್ತ ಸಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಯೋಜನೆ ಸದಸ್ಯರು ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರವನ್ನು ಕಲಿಸುವಂತಾಗಬೇಕು. ದೇಶ ರಾಮ ರಾಜ್ಯವಾಗಲು ಗಾಂಧೀಜಿ ಅವರ ತತ್ವಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಸಮಾಜದ ಅಭಿವೃದ್ಧಿಗೆ ಉತ್ತಮ ಕಾರ್ಯಗಳನ್ನು ಮಾಡುವಂತ ಯೋಜನೆಗಳನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ರೂಪಿಸಲಾಗಿದ್ದು ಸದಸ್ಯರು ಇದರ ಪ್ರಯೋಜನವನ್ನು ಸದುಪಯೋಗಪಡಿಸಿ ಕೊಳ್ಳುವಂತಾಗಬೇಕು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಅಧ್ಯಕ್ಷರಾದ ವಿ.ಟಿ. ರಂಗಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಪವಿತ್ರವಾದ ಸ್ಥಳ ಅದನ್ನು ವಿರೋಧ ಮಾಡಿದವರು ಅನುಭವಿಸುತ್ತಿದ್ದಾರೆ. ನಮಗೆ ಸಾಧ್ಯವಾದಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು. ಮತ್ತೊಬ್ಬರನ್ನು ದ್ವೇಷಿಸಬಾರದು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಬಡ ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕೆಂಬ ಉದ್ದೇಶದಿಂದ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಜನಜಾಗೃತಿ ವೇದಿಕೆಯ ಸದಸ್ಯರಾದ ಪಳೆಯಂಡ ಪಾರ್ಥ ಚಿಣ್ಣಪ್ಪ ಠರಾವು ಮಂಡಿಸಿದರು. ಜನಜಾಗೃತಿ ವೇದಿಕೆಯ ಟಾಟು ಮೊಣ್ಣಪ್ಪ, ಮಹಿಳಾ ಸಮಾಜದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಯೋಜನೆಯ ಸುಬ್ರಮಣಿ, ಷಣ್ಮುಗರಾವ್, ಮಲ್ಲಿಕಾರ್ಜುನ, ವಿಶ್ವನಾಥ್, ಮುಂತಾದವರು ಉಪಸ್ಥಿತರಿದ್ದರು.
ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಹರೀಶ್, ಮಡಿಕೇರಿ ಯೋಜನಾಧಿಕಾರಿ ಪುರುಷೋತ್ತಮ್ ಸೇರಿದಂತೆ ಶೌರ್ಯ ವಿಪತ್ತು ತಂಡ, ನವ ಜೀವನ ಸಮಿತಿ ಸದಸ್ಯರು ಸೇರಿದಂತೆ ಜನಜಾಗೃತಿ ವೇದಿಕೆ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸೇವಾ ಪ್ರತಿನಿಧಿಗಳು, ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದಕ್ಕೂ ಮೊದಲು ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಸ್ಥಾನ ಬಳಿಯಿಂದ ಬೃಹತ್ ಜಾಥಾ ಸಮಾವೇಶವನ್ನು ಜನ ಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಚಾಲನೆ ನೀಡಿದರು.
ಬಳಿಕ ಜಾಥಾ ಜೈನರ ಬೀದಿ, ದೊಡ್ಡಟ್ಟಿ ಚೌಕಿಗಾಗಿ, ಗಡಿಯಾರ ಕಂಬದ ಬಳಿಯಿಂದ ತಾಲೂಕು ಕಚೇರಿ ಮಾರ್ಗವಾಗಿ ಮಹಿಳಾ ಸಮಾಜದವರೆಗೆ ನಡೆಯಿತು.