ವೀರಾಜಪೇಟೆ, ಅ. ೧೫: ವೀರಾಜಪೇಟೆ ಪುರಸಭೆ ಮಾಸಿಕ ಸಭೆಯು ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗೌರಿಕೆರೆ ಒತ್ತುವರಿ ಆಗಿರುವ ವಿಚಾರದಲ್ಲಿ ಚರ್ಚೆ ನಡೆದು ಸರ್ವೆಯಲ್ಲಿ ಈಗಾಗಲೇ ಒತ್ತುವರಿ ಆಗಿರುವುದು ಸಾಬೀತಾಗಿದ್ದು ಇದನ್ನು ಖಚಿತ ಪಡೆಸಿಕೊಳ್ಳಲು ಮುಂದಿನ ದಿನಗಳಲ್ಲಿ ಮರುಸರ್ವೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಆರಂಭದಲ್ಲಿಯೆ ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಸಭಾ ನಡವಳಿಯಲ್ಲಿ ತಾವು ಸೂಚಿಸಿದ ಕೆಲವು ಪ್ರಮುಖ ವಿಚಾರಗಳನ್ನು ಕಾರ್ಯಸೂಚಿಯಲ್ಲಿ ನಮೂದಿಸದಿರುವ ಬಗ್ಗೆ ಪ್ರಸ್ತಾಪಿಸಿದಾಗ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಕಾರ್ಯಸೂಚಿಯಂತೆ ಸಭೆ ನಡೆಸಲು ಆಗ್ರಹಿಸಿದರು.

ಆದರೆ ಪೃಥ್ವಿನಾಥ್ ಅಡ್ಡಿಪಡಿಸಿದಾಗ ವಾಗ್ವಾದ ನಡೆದು ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿದ ಘಟನೆಗೆ ಸಭೆ ಸಾಕ್ಷಿಯಾಯಿತು. ಪೊಲೀಸರ ಪ್ರವೇಶಕ್ಕೆ ಕೆಲವು ಸದಸ್ಯರು ಅಡ್ಡಿಪಡಿಸಿದರು. ನಂತರ ನಡೆದ ಸಭೆಯಲ್ಲಿ ಅಧ್ಯಕ್ಷರು ಇತರ ವಿಚಾರಗಳಲ್ಲಿ ಚರ್ಚೆ ನಡೆಸುವಂತೆ ಸಿ.ಕೆ ಪೃಥ್ವಿನಾಥ್ ಅವರಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಸದಸ್ಯ ರಜಿನಿಕಾಂತ್ ಮಾತನಾಡಿ; ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಾಗಿದೆ. ಕೆಲವು ವಾರ್ಡ್ಗಳಿಗೆ ಕೊಟ್ಯಂತರ ರೂಪಾಯಿ ನೀಡಲಾಗಿದೆ. ತಮ್ಮ ವಾರ್ಡಿಗೆ ಕೇವಲ ೩೦ ಲಕ್ಷ ಮಾತ್ರ ನೀಡಲಾಗಿದೆ. ಈ ವಿಚಾರದಲ್ಲಿ ಚರ್ಚೆ ನಡೆದಾಗ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಅವರು ಕೂಡ ತಮ್ಮ ವಾರ್ಡಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿದರು. ಈ ಕುರಿತು ಅಧ್ಯಕ್ಷರು ಮಾಹಿತಿ ನೀಡಿ ಯಾವ ತಾರತಮ್ಯ ಆಗಿಲ್ಲ. ಪುರಸಭೆ ಆದ ಬಳಿಕ ವಾರ್ಡ್ ವಿಸ್ತರಣೆಗೊಂಡ ಕಾರಣ ಹೆಚ್ಚುವರಿ ಅನುದಾನವನ್ನು ಆ ಭಾಗಕ್ಕೂ ನೀಡಲಾಗಿದೆ ಎಂದು ಹೇಳಿದರು.

ನಾಮನಿರ್ದೇಶಿತ ಸದಸ್ಯ ಜಿ.ಜಿ. ಮೋಹನ್ ಮಾತನಾಡಿ ಪುರಸಭೆಯಲ್ಲಿ ನಾವು ಜನರ ಪರವಾಗಿ ಕೆಲಸಕ್ಕೆ ಬಂದಾಗ ಕೆಲವೊಂದು ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸುವುದಿಲ್ಲ. ನಮ್ಮ ಮುಂದೆಯೇ ಜನರೊಂದಿಗೆ ಉಡಾಫೆಯಿಂದ ವರ್ತಸುತ್ತಾರೆ. ಕೆಲವು ಖಾಯಂ ಅಲ್ಲದ ಸಿಬ್ಬಂದಿಗಳು ಸಹ ಸೌಜನ್ಯವಾಗಿ ವರ್ತಿಸದೆ ಸದಸ್ಯರಗಳ್ನು ಕೇವಲವಾಗಿ ಕಾಣುತ್ತಾರೆಂದು ಆರೋಪಿಸಿದರು.

ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಅಗಲಿಕರಣ ನಡೆಸಲು ಒತ್ತಾಯ ಕೇಳಿ ಬರುತ್ತಿದೆ. ಮುಖ್ಯ ರಸ್ತೆಯಲ್ಲಿ ಹಳೆಯ ಮಳಿಗೆಗಳನ್ನು ರಸ್ತೆಗೆ ಹೊಂದಿಕೊAಡAತೆ ನವೀಕರಣ ಮಾಡುತ್ತಿದ್ದು ಪುರಸಭೆಯಿಂದ ಯಾವ ಪರವಾನಿಗೆಯನ್ನು ಪಡೆದುಕೊಳ್ಳುತ್ತಿಲ್ಲ. ಇದು ರಸ್ತೆ ವಿಸ್ತರಣೆಯ ಸಮಯದಲ್ಲಿ ನಮಗೆ ತೊಡಕಾಗುತ್ತದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೆಲವು ಅಂಗಡಿ ಮಾಲೀಕರು ಮುಖ್ಯ ರಸ್ತೆಯಲ್ಲಿ ರಸ್ತೆಗೆ ಜಾಗ ಬಿಟ್ಟಿದ್ದರೂ ಖಾಲಿ ಜಾಗಕ್ಕೆ ಶೆಡ್ಡ್ ನಿರ್ಮಿಸಿ ಚರಂಡಿವರೆಗೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತೆರವುಗೊಳಿಸಿ ಖಾಲಿ ಜಾಗವನ್ನು ಪುರಸಭೆ ವಶಕ್ಕೆ ಪಡೆದು ಪಾರ್ಕಿಂಗ್ ವ್ಯವಸ್ತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವಿಚಾರದಲ್ಲಿ ಅಧ್ಯಕ್ಷರು ಅಧಿಕಾರಿಗಳ ಒಂದು ತಂಡ ರಚಿಸಿ ಇಂದಿನಿAದಲೇ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದರು.

ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಓರ್ವರು ಪುರಸಭೆಯ ಅಧಿಕೃತ ವಸತಿಗೃಹದಲ್ಲಿ ಇದ್ದರೂ ಕರ್ತವ್ಯಕ್ಕೆ ನಿರಂತರ ಗೈರು ಹಾಜರಿ ಆಗುತ್ತಿದ್ದಾರೆ. ಇವರಿಗೆ ಹಲವಾರು ಬಾರಿ ನೋಟೀಸ್ ನೀಡಿದರೂ ವಸತಿಯನ್ನು ತೆರವುಗೊಳಿಸುತ್ತಿಲ್ಲ. ಈ ನಿಟ್ಟಿನಲ್ಲಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆ ನಿರ್ಣಯ ಕೈಗೊಂಡಿತು.

ಬಿಜೆಪಿ ಸದಸ್ಯೆ ಅನಿತಾ ಮಾತನಾಡಿ, ನೆಹರು ನಗರದಲ್ಲಿ ಬಡ ಕುಟುಂಬಕ್ಕೆ ಅಗತ್ಯ ಕುಡಿಯುವ ನೀರು ಸಂಪರ್ಕ ನೀಡುವಲ್ಲಿ ನೀರಿನ ವಿಭಾಗದ ಸಿಬ್ಬಂದಿ ನಿರ್ಲಕ್ಷö್ಯ ತೊರುತ್ತಿದ್ದು, ತಕ್ಷಣ ಆ ಮನೆಗೆ ಕುಡಿಯುವ ನೀರಿನ ಸಂಪರ್ಕ ನೀಡುವಂತೆ ಒತ್ತಾಯಿಸಿದರು. ಇದೇ ವಿಚಾರವಾಗಿ ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ಅರಸು ನಗರದಿಂದ ಅಯ್ಯಪ್ಪ ಬೆಟ್ಟಕ್ಕೆ ನೀರಿನ ಸಂಪರ್ಕದ ಕೊಳವೆ ಸಾಕಷ್ಟು ಸೋರಿಕೆ ಆಗುತ್ತಿದ್ದರೂ ಸಿಬ್ಬಂದಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರನ್ನು ಆಗ್ರಹಿಸಿದರು.

ಈ ವಿಚಾರದಲ್ಲಿ ಸಿಬ್ಬಂದಿ ಇರ್ಫಾನ್ ಅವರನ್ನು ತರಾಟೆಗೆ ತೆಗೆದುಕೊಂಡು ನೀವುಗಳು ಖಾಸಗಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಅದನ್ನು ತಕ್ಷಣ ಕೈಬಿಟ್ಟು ಅಗತ್ಯ ಕಡೆ ನೀರಿನ ಸೋರಿಕೆ ತಡೆಯಬೇಕು. ನೀರಿನ ವಿಚಾರದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಇದೇ ಸಂದರ್ಭ ಮುಖ್ಯಾಧಿಕಾರಿ ತಮ್ಮ ದೂರವಾಣಿ ಕರೆ ಸ್ವೀಕರಿಸದಿರುವನ್ನು ಸಭೆಗೆ ತಿಳಿಸಿ ಅವರ ನಡೆಗೆ ಆಕ್ಷೇಪಿಸಿದರು.

ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ೨೦೨೧ರಲ್ಲಿ ನಡೆದಿದ್ದ ಪೀಠೋಪಕರಣ ಹಗರಣದಲ್ಲಿ ಲೋಕಾಯುಕ್ತ ತನಿಖೆಯಲ್ಲಿ ಆರೋಪ ಸಾಬೀತಾಗಿದ್ದು, ಅಂದಿನ ಮುಖ್ಯಾಧಿಕಾರಿಗಳು ಹೊಣೆಗಾರರಾಗಿದ್ದು, ಅವರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದರು. ಇವರಿಂದಾಗಿ ಆಗಿನ ಪಟ್ಟಣ ಪಂಚಾಯಿತಿಗೆ ೨.೭೩ ಲಕ್ಷ ನಷ್ಟವಾಗಿದೆ. ಇದನ್ನು ಅವರಿಂದಲೇ ವಸೂಲಿ ಮಾಡುವಂತೆ ಸಭೆಗೆ ತಿಳಿಸಿದರು. ಈ ವಿಚಾರದಲ್ಲಿ ಅಧ್ಯಕ್ಷರು ಮಾಹಿತಿ ನೀಡಿ ಈ ಪ್ರಕರಣದ ಲೋಕಾಯುಕ್ತ ತೀರ್ಪನ್ನು ಪ್ರಶ್ನಿಸಿ ಆಗಿನ ಮುಖ್ಯಾಧಿಕಾರಿಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದರಿಂದ ಈ ಸಭೆಯಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಫಸಿಹಾ ತಬುಸಮ್, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ಹೇಮ ಕುಮಾರ್, ಪರಿಸರ ಅಭಿಯಂತರ ನೀತು ಸಿಂಗ್ ಉಪಸ್ಥಿತರಿದ್ದರು.