ಮಡಿಕೇರಿ, ಅ. ೧೪ : ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿಯೇ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಹಸಿರು ವಲಯದಲ್ಲಿ ಅಕ್ರಮ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬನಿವಳವಾಡಿ ಗ್ರಾಮದ ಬೋಯಿಕೇರಿಯಲ್ಲಿ ಈ ಅಕ್ರಮ ಗ್ಲಾಸ್ ಬ್ರಿಡ್ಜ್ ತಲೆ ಎತ್ತಿದೆ. ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಅವರ ಪತಿ ಭೀಮಯ್ಯ ಎಂಬವರು ಅದೇ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಲ್ಡ್ ಎಸ್ಕೇಪ್ ಹೆಸರಿನ ಈ ಗ್ರಾಸ್ ಬ್ರಿಡ್ಜ್ ನಿರ್ಮಾಣ ಮಾಡಿರುವ ಆರೋಪ ಹೊತ್ತಿದ್ದಾರೆ. ಸರ್ಕಾರದಿಂದ ಗ್ರೀನ್ ಬೆಲ್ಟ್ ಎಂದು ಗುರುತಿಸಿಕೊಂಡಿರುವ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವಂತಿಲ್ಲ. ಭೂ ಪರಿವರ್ತನೆಗೆ ಅವಕಾಶವೂ ಇರುವುದಿಲ್ಲ. ಹಾಗಾಗಿ ಅಂತಹ ಸ್ಥಳಗಳಲ್ಲಿ ಬೃಹತ್ ಗ್ಲಾಸ್ ಬ್ರಿಡ್ಜ್ಗಳನ್ನು ನಿರ್ಮಿಸುವಂತಿಲ್ಲ. ಆದರೆ ಭೀಮಯ್ಯ ಎಂಬುವರು ತಮ್ಮ ಖಾಸಗಿ ಖಾಫಿ ತೋಟದ ಸರ್ವೆ ನಂಬರ್ ೫೦/೪೨ ರಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟಿçÃಯ ಹೆದ್ದಾರಿ ೨೭೫ರ ಬೋಯಿಕೇರಿ ಬಳಿ ಅಂದಾಜು ಎರಡು ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಭೂ ಪರಿವರ್ತನೆ ಕೂಡ ಮಾಡಿರುವುದಿಲ್ಲ. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲು ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ರಾಷ್ಟಿçÃಯ ಹೆದ್ದಾರಿ, ಅರಣ್ಯ ಇಲಾಖೆ, ಮೂಡಾ ಸೇರಿದಂತೆ ಹಲವು ಇಲಾಖೆಗಳ ನಿರಾಪೇಕ್ಷಣಾ ಹಾಗೂ ಅನುಮತಿ ಪತ್ರಗಳನ್ನು ಪಡೆಯಬೇಕಾಗುತ್ತದೆ. ಆದರೆ ಇಲ್ಲಿ ಈ ಯಾವುದೇ ಇಲಾಖೆಗಳ ಎನ್‌ಒಸಿಗಳಿಲ್ಲದೆ ಈಗಾಗಲೇ ಅನಧಿಕೃತವಾಗಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಈಗಾಗಲೆ ಬಹಳಷ್ಟು ಮರಗಳನ್ನು ಕೂಡ ಅಕ್ರಮವಾಗಿ ಕಡಿದಿರುವ ಶಂಕೆ ಇದೆ. ಅಲ್ಲದೆ, ಗ್ಲಾಸ್ ಬ್ರಿಡ್ಜ್ ವೀಕ್ಷಣೆಗೆ ಬರುವ ಪ್ರವಾಸಿಗರಿಗಾಗಿ ಇದೇ ಸ್ಥಳದಲ್ಲಿ ಹತ್ತಾರು ವಾಣಿಜ್ಯ ಮಳಿಗೆಗಳನ್ನು ಕೂಡ ನಿರ್ಮಿಸಲಾಗಿದ್ದು, ಇವೆಲ್ಲವೂ ಅನಧಿಕೃತ ಎನ್ನಲಾಗಿದೆ.

ಪರಿಸರವಾದಿಗಳ ಆಕ್ರೋಶ

ಈಗಾಗಲೇ ಜಿಲ್ಲೆಯ ಹಲವೆಡೆ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಗ್ಲಾಸ್ ಬ್ರಿಡ್ಜ್ಗಳ ವಿರುದ್ಧ ದೂರು ನೀಡಿ ಅವುಗಳನ್ನು ಸ್ಥಗಿತಗೊಳಿಸಿರುವ ಕೊಡಗು ಏಕೀಕರಣ ರಂಗ, ಇದೀಗ ಬೋಯಿಕೇರಿ ಬಳಿಯ ಅನಧಿಕೃತ ಗ್ಲಾಸ್ ಬ್ರಿಡ್ಜ್ ವಿರುದ್ಧವೂ ಆಕ್ರೋಶ ಹೊರಹಾಕಿದೆ.. ಇತ್ತೀಚೆಗೆ ಜಿಲ್ಲೆಯಲ್ಲಿ ಗ್ಲಾಸ್ ಬ್ರಿಡ್ಜ್ ಎಂಬುದು ದಂಧೆಯಾಗಿ ಪರಿಣಮಿಸಿದ್ದು, ಇದು ಕೊಡಗಿನ ಪ್ರವಾಸೋಧ್ಯಮಕ್ಕೆ ಮಾತ್ರವಲ್ಲದೆ, ಪರಿಸರಕ್ಕೂ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಡಗು ಏಕೀಕರಣ ರಂಗದ ಸಂಚಾಲಕ ತಮ್ಮು ಪೂವಯ್ಯ, ಬೋಯಿಕೇರಿ ಬಳಿ ನಿರ್ಮಾಣವಾಗಿರುವ ಗ್ಲಾಸ್ ಬ್ರಿಡ್ಜ್ ಅನ್ನು ಜಿಲ್ಲಾಡಳಿತ ತಕ್ಷಣವೇ ತೆರವು ಮಾಡಬೇಕು. ಇಲ್ಲದಿದ್ದಲ್ಲಿ ನಿರ್ಮಾಣದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ಲಾಸ್ ಬ್ರಿಡ್ಜ್ ನಿರ್ಮಾಣ ಸಂದರ್ಭ ಮಾಲೀಕರು ಅನುಮತಿಗಾಗಿ ವಿವಿಧ ಇಲಾಖೆಗಳ ಕದ ತಟ್ಟಿದ್ದಾರೆ. ಆದರೆ ಎಲ್ಲಿಯೂ ಕೂಡ ಅನುಮತಿ ದೊರಕಿಲ್ಲ. ಆದರೂ ಕೂಡ ಅನಧಿಕೃತ ಬ್ರಿಡ್ಜ್ ನಿರ್ಮಾಣ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯ ತಂದಿದೆ.

ಅಧ್ಯಕ್ಷೆ ಪತಿಯ ಗ್ಲಾಸ್ ಬ್ರಿಡ್ಜ್ಗೆ ಅದೇ ಪಂಚಾಯಿತಿ ಪಿಡಿಒ ನಿರಾಪೇಕ್ಷಣಾ ಪತ್ರ ನೀಡಿದ್ದಾರೆ. ಮೂಡಾ, ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯೇ ನಿರಾಪೇಕ್ಷಣಾ ಪತ್ರ ನೀಡಲು ಹಿಂದೇಟು ಹಾಕಿರುವಾಗ ಪಂಚಾಯಿತಿ ಪಿಡಿಒ ಅವರು ಹೇಗೆ ಈ ನಿರ್ಮಾಣಕ್ಕೆ ಎನ್‌ಒಸಿ ನೀಡಿದರು ಎಂಬುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಗ್ರಾಸವಾಗಿದೆ. ಜಿಲ್ಲಾಮಟ್ಟದಲ್ಲಿ ಹಸಿರು ಪಟ್ಟಿಯಲ್ಲಿ ಭೂ ಪರಿವರ್ತನೆ ಸಾಧ್ಯವಿಲ್ಲ ಎಂಬುದನ್ನು ಅರಿತ ಹೂಡಿಕೆದಾರರು ಇದೀಗ ಬೆಂಗಳೂರು ಮಟ್ಟದಲ್ಲಿ ಭೂ ಪರಿವರ್ತನೆಗೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ತಾಲೂಕು ಪಂಚಾಯಿತಿ ಹೇಳಿಕೆ

ಈ ಗ್ಲಾಸ್ ಬ್ರಿಡ್ಜ್ ಯೋಜನೆಗೆ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಅಥವಾ ಅನುಮೋದನೆ ಪಡೆದುಕೊಂಡ ಬಗ್ಗೆ ಅವುಗಳ ದಾಖಲಾತಿಗಳನ್ನು ಹಾಜರುಪಡಿಸಲು ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮಾಲೀಕರಿಗೆ ಸೂಚಿಸಿ ದ್ದರೂ ಇದುವರೆಗೂ ಸಲ್ಲಿಕೆಯಾಗಿಲ್ಲವೆಂದು ತಹಶೀಲ್ದಾರ್ ಅವರ ಗಮನಕ್ಕೆ ಬಂದಿದ್ದು, ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಮಾಲೀಕರಿಗೆ ನೋಟೀಸ್ ಜಾರಿ ಮಾಡಲು ತಹಶೀಲ್ದಾರ್ ಆದೇಶಿಸಿದ್ದಾರೆ.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರು ಕೂಡ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.