ಮಡಿಕೇರಿ, ಅ. ೧೫: ಕುಂದಾ ಬೆಟ್ಟದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕೊಡಗಿನ ಮೊದಲ ಬೋಡ್ ನಮ್ಮೆ ತಾ.೧೭ ಹಾಗೂ ೧೮ರಂದು ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡ್ ಕುಂದಾ ಹಾಗೂ ಮುಗುಟಗೇರಿ ಗ್ರಾಮದಲ್ಲಿ ನಡೆಯಲಿದೆ. ಕುಂದತ್ ಬೊಟ್ಟ್ಲ್ ನೇಂದ ಕುದುರೆ... ಪಾರಣ ಮಾನಿಲ್ ಅಳ್ಂಜ ಕುದುರೆ.. ಎಂಬ ಬೋಡ್ ನಮ್ಮೆಯ ಜಾನಪದ ಹಾಡಿನಂತೆ ಬೊಟ್ಟಿಯತ್ ನಾಡಿನ ಕುಂದಾ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಕಳೆದ ಶನಿವಾರ ಕೊಡಗಿನ ಮೊದಲ ಬೋಡ್ ನಮ್ಮೆಗೆ ಕಟ್ಟ್ ಬೀಳುವ ಮೂಲಕ ಊರಿನಲ್ಲಿ ಹಬ್ಬದ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಯಿತು.
ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ತಕ್ಕಾಮೆಯಲ್ಲಿ ನಡೆಯುವ ಈ ಹಬ್ಬಕ್ಕೆ ಇಲ್ಲಿನ ಅಂಬಲದಲ್ಲಿ ಹಬ್ಬದ ಕಟ್ಟುಪಾಡುಗಳನ್ನು ತಿಳಿಸಿ ಬೋಡ್ ನಮ್ಮೆಯ ಸಾಂಪ್ರದಾಯಿಕ ಹಾಡು ಹೇಳುತ್ತಾ ಡೋಲು ಬಾರಿಸುವ ಮೂಲಕ ಚಾಲನೆ ದೊರೆಯಿತು.
ತಾ.೧೭ರಂದು ಸಾಂಪ್ರದಾಯಿಕ ಮನೆಕಳಿ ಹಾಗೂ ತಾ.೧೮ರಂದು ಸಾಂಪ್ರದಾಯಿಕ ಕುದುರೆ ಹಬ್ಬ ಹಾಗೂ ಬೆಟ್ಟ ಹತ್ತುವ ಕಾರ್ಯಕ್ರಮ ಇರುತ್ತದೆ. ಕಾವೇರಿ ತೀರ್ಥೋದ್ಭವದ ಬಳಿಕ ಕಾವೇರಿ ಪವಿತ್ರ ತೀರ್ಥವನ್ನು ತಂದು ತಾ.೧೮ರಂದು ಬೆಟ್ಟದ ಮೇಲಿರುವ ಬೊಟ್ಲಪ್ಪನಿಗೆ ಅರ್ಪಿಸುವ ಮೂಲಕ ವಿವಿಧ ಆಚರಣೆ ನಡೆಯುತ್ತದೆ.
ತಾ.೧೮ರಂದು ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬದ ಬಲ್ಯಮನೆಯಿಂದ ಕೃತಕವಾಗಿ ತಯಾರಿಸಲಾದ ತಲಾ ಒಂದೊAದು ಕುದುರೆಯನ್ನು ಶೃಂಗರಿಸಿ ಮಧ್ಯಾಹ್ನ ಸರಿಸುಮಾರು ೧ ಗಂಟೆಗೆ ಇಲ್ಲಿನ ಈಶ್ವರ ದೇವಸ್ಥಾನದ ಸಮೀಪದ ಅಂಬಲದಲ್ಲಿ ಸೇರಿ ಹತ್ತಿರದ ಕುಂದಾ ಬೆಟ್ಟವನ್ನು ಹತ್ತಲು ಪ್ರಾರಂಭಿಸಲಾಗುತ್ತದೆ. ಬೆಟ್ಟವನ್ನು ಏರಿ ಅಲ್ಲಿ ಬೊಟ್ಲಪ್ಪ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಲಾಗುತ್ತದೆ.
 
						