ಶನಿವಾರಸಂತೆ, ಅ. ೧೪: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಶನಿವಾರಸಂತೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಪ್ರತಿಭಟನಾಕಾರರು ಕಂದಾಯ ಇಲಾಖೆಗೆ ತೆರಳಿ ರಾಕೇಶ್ ಕಿಶೋರ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಉಪತಹಶೀಲ್ದಾರ್ ಮಧುಸೂದನ್ ಅವರ ಮೂಲಕ ರಾಷ್ಟçಪತಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್ ಮಾತನಾಡಿ, ಶೂ ಎಸೆತದ ಪ್ರಕರಣವನ್ನು ಎಲ್ಲೆಡೆ ದಲಿತ ಸಂಘಟನೆಗಳನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿವೆ ಎಂದರು. ಜಿಲ್ಲಾ ಸಂಯೋಜಕ ಎಂ.ಎನ್.ರಾಜಪ್ಪ ಮಾತನಾಡಿ, ರಾಕೇಶ್ ಕಿಶೋರ್ಗೆ ಜೈಲು ಶಿಕ್ಷೆ ವಿಧಿಸಬೇಕು ಎಂದರು.
ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ದಸಂಸ ಜಿಲ್ಲಾ ಕಾರ್ಯದರ್ಶಿ ಎಂ.ಈ. ಪೊನ್ನಪ್ಪ, ಜಿಲ್ಲಾ ಸಂಚಾಲಕರಾದ ರಾಜಪ್ಪ, ದಯಾಕರ್, ಎಂ.ಎನ್. ಸಿದ್ದಯ್ಯ, ಸಂಯೋಜಕ ಡೀಲಾಕ್ಷ, ಖಜಾಂಚಿ ವೀರಭದ್ರ, ತಾಲೂಕು ಸಂಚಾಲಕ ಹೆಬ್ಬುಲುಸೆ ಚಂದ್ರಶೇಖರ್, ಗಂಗಾಧರ್ ಹಾಸನ, ಸಲಹಾ ಸಮಿತಿಯ ಸದಸ್ಯ ಎಂ.ಆರ್. ಮಲ್ಲೇಶ್ ವಹಿಸಿದ್ದರು.