ನಾಪೋಕ್ಲು, ಅ. ೧೪: ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಮಹಿಳಾ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಭಗವತಿ ಮಹಿಳಾ ಸಮಾಜದ ಅಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹೇಳಿದರು.

ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಭಗವತಿ ಮಹಿಳಾ ಸಮಾಜದ ವತಿಯಿಂದ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮಹಿಳಾ ಸಮಾಜದ ನಿವೇಶನದ ಜೊತೆಗೆ ಕಟ್ಟಡದ ಅವಶ್ಯಕತೆ ಇದೆ. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕಟ್ಟಡದ ಅಭಿವೃದ್ಧಿಗೆ ಅನುದಾನ ನೀಡಿದ್ದರು.

ದಾನಿಗಳು ಮಹಿಳಾ ಸಮಾಜಕ್ಕೆ ವಿವಿಧ ಕೊಡುಗೆಗಳನ್ನು ನೀಡಿದ್ದು, ಸಮಾಜ ಅಭಿವೃದ್ಧಿ ಸಾಧಿಸುತ್ತಿದೆ. ಮುಂದಿನ ಕೆಲವು ಕಾರ್ಯಕ್ರಮಗಳನ್ನು ಕೊಡವ ಮಕ್ಕಳ ಕೂಟ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ, ಅಂಗನವಾಡಿ ಮಕ್ಕಳ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮಹಿಳಾ ಸಮಾಜದ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ, ಕಾರ್ಯದರ್ಶಿ ಬೊಪ್ಪಂಡ ಯಮುನಾ, ಸಹ ಕಾರ್ಯದರ್ಶಿ ಶಿವಚಾಳಿಯಂಡ ರೋಹಿಣಿ, ನಿರ್ದೇಶಕರಾದ ಶಿವಚಾಳಿಯಂಡ ಪಾರ್ವತಿ ಬೆಳ್ಳಿಯಪ್ಪ, ಶಿವಚಾಳಿಯಂಡ ದೇವಕ್ಕಿ, ಶಿವಾಚಾಳಿಯಂಡ ಬೋಜಮ್ಮ ರಾಣಿ, ಚೀಯಕಪೂವಂಡ ಮುತ್ತುರಾಣಿ, ಕುಂದೈರಿರ ಶಾಂತಿ, ಕುಲ್ಲೇಟಿರ ಹೇಮ, ಬೊಪ್ಪಂಡ ಯಶೋಧ, ಪೊರ್ಕೊಂಡ ಭಾಗ್ಯವತಿ, ಅರೆಯಡ ಸರಸು, ಕೇಲೆಟಿರ ಕವಿತಾ, ನೂರಂಬಾಡ ಗಾಯತ್ರಿ, ಶಿವಾಚಾಳಿಯಂಡ ವಿಲ್ಮಾ ಉಪಸ್ಥಿತರಿದ್ದರು.

ಶಿವಾಚಾಳಿಯಂಡ ವಿಲ್ಮಾ ಪ್ರಾರ್ಥಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಪೊರ್ಕೊಂಡ ಶಾಂತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.