ಮಡಿಕೇರಿ, ಅ. ೧೨: ಜೀವನದಲ್ಲೂ ಕ್ರೀಡಾಸ್ಫೂರ್ತಿ ಅಳವಡಿಸಿಕೊಳ್ಳುವುದರಿಂದ ವ್ಯಕ್ತಿತ್ವ ಗಟ್ಟಿಯಾಗುತ್ತದೆ ಎಂದು ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅಭಿಮತ ವ್ಯಕ್ತಪಡಿಸಿದರು.
ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ಆಯೋಜಿತ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಶಾಸಕದ್ವಯರು ಮಾತನಾಡಿದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಮಡಿಕೇರಿ ದಸರಾ ಅಚ್ಚುಕಟ್ಟಾಗಿ ನಡೆದಿದೆ. ಕ್ರೀಡಾ ಸಮಿತಿ ದಸರಾಕ್ಕೆ ರಂಗು ತರುವಲ್ಲಿ ಯಶಸ್ವಿಯಾಗಿದೆ. ದೊಡ್ಡ ಮಟ್ಟದಲ್ಲಿ ಪಂದ್ಯಾವಳಿಯನ್ನು ಆಯೋಜಿಸಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿರುವುದು ಗಮನಾರ್ಹ ಸಂಗತಿ ಎಂದು ಶ್ಲಾಘಿಸಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದರೊಂದಿಗೆ ಯುವಕರನ್ನು ಸಂಘಟಿಸಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು.
ಮುಖ್ಯಮAತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕ್ರೀಡೆಗೆ ಕೊಡಗು ಜಿಲ್ಲೆ ಹೆಸರುವಾಸಿಯಾಗಿದೆ. ದೇಶ, ರಾಜ್ಯಕ್ಕೆ ಅಪಾರ ಕ್ರೀಡಾಪಟುಗಳನ್ನು ಪುಟ್ಟ ಜಿಲ್ಲೆಯಾಗಿರುವ ಕೊಡಗು ನೀಡಿದೆ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಈ ರೀತಿ ಕಾರ್ಯಕ್ರಮ ಅಗತ್ಯ. ಸೋಲು-ಗೆಲುವನ್ನು ಸಮಾನ ಸ್ವೀಕರಿಸುವ ಗುಣ ಕ್ರೀಡಾಪಟುಗಳಿಗಿರುತ್ತದೆ ಎಂದರು. ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿದರು.
ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ನಗರಸಭಾ ಸದಸ್ಯರುಗಳಾದ ನೆರವಂಡ ಅನಿತಾ ಪೂವಯ್ಯ, ಚಿತ್ರಾವತಿ, ಮಂಡೀರ ಸದಾ ಮುದ್ದಪ್ಪ, ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್, ಕ್ರೀಡಾ ಸಮಿತಿ ಗೌರವಾಧ್ಯಕ್ಷ ರವಿ ಕರ್ಕೆರ, ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೊಳಿ, ಗುತ್ತಿಗೆದಾರರಾದ ಶಶಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಹಾಜರಿದ್ದರು.
ಪ್ರದರ್ಶನ ಪಂದ್ಯ : ಕೊಡಗು ಪ್ರೆಸ್ ಕ್ಲಬ್ ಹಾಗೂ ದಸರಾ ಕ್ರೀಡಾ ಸಮಿತಿ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಕ್ರೀಡಾ ಸಮಿತಿ ವಿಜಯ ಸಾಧಿಸಿತು.