ಮಡಿಕೇರಿ, ಅ. ೭: ಕೊಡಗಿನ ಯುವಕ, ಚಿತ್ರನಟ ಉಳ್ಳಿಯಡ ಭುವನ್ ಪೊನ್ನಣ್ಣಗೆ ಹಲೋ ೧೨೩ ಚಿತ್ರದ ಬಳಿಕ ಇದೀಗ ಮತ್ತೊಂದು ಸಿನಿಮಾದ ಅವಕಾಶವೂ ಒಲಿದು ಬಂದಿದೆ. ನಿರ್ಮಾಪಕ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರು ಇತ್ತೀಚಿಗಷ್ಟೆ ತಮ್ಮ ಹೊಸ ಚಿತ್ರ ಹಲೋ ೧೨೩ಗೆ ಭುವನ್ ಪೊನ್ನಣ್ಣ ಅವರನ್ನು ನಾಯಕ ನಟರನ್ನಾಗಿ ಆಯ್ಕೆ ಮಾಡಿದ್ದರು. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ. ಇದೀಗ ಮತ್ತೊಂದು ಹೊಸ ಚಿತ್ರ ಬುಲ್ಲಿಗೂ ಭುವನ್ ಆಯ್ಕೆಯಾಗಿದ್ದಾರೆ.

ಈ ಚಿತ್ರ ಗಣೇಶ್ ಮಹದೇವ್, ಸುಡಿಯೋಸ್ ಸಂಸ್ಥೆ ಮೂಲಕ ನಿರ್ಮಾಣವಾಗಲಿದೆ. ಇತ್ತೀಚೆಗೆ ತಾರಾ ದಂಪತಿಯರಾದ ಭುವನ್ ಹಾಗೂ ಹರ್ಷಿಕಾ ಅವರ ಪುತ್ರಿ ತ್ರಿದೇವಿ ಪೊನ್ನಕ್ಕಳ ಮೊದಲ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿದ್ದು, ಇಲ್ಲಿ ಬಹಳಷ್ಟು ಚಿತ್ರತಾರೆಯರು ಪಾಲ್ಗೊಂಡಿದ್ದರು. ಈ ಸಮಾರಂಭಕ್ಕೆ ಆಗಮಿಸಿದ್ದ ಗಣೇಶ್ ಮಹದೇವ್ ಅವರು ಬುಲ್ಲಿ ಚಿತ್ರ ವಿಷಯ ಪ್ರಕಟಿಸಿ ಅಚ್ಚರಿ ನೀಡಿದರಲ್ಲದೆ ಮುಂಗಡ ಹಣದ ಚೆಕ್ ಅನ್ನೂ ವಿತರಿಸಿದ್ದಾರೆ.

ಈ ಹಿಂದೆ ರಾಂಧವ ಚಿತ್ರದಲ್ಲಿ ನಟಿಸಿದ್ದ ಬಳಿಕ ಭುವನ್ ನಟನೆಯ ಚಿತ್ರಗಳು ಹೊರ ಬಂದಿರಲಿಲ್ಲ. ಇದಕ್ಕೂ ಮುನ್ನ ಕೂಲ್, ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಭುವನ್ ಕಾಣಿಸಿಕೊಂಡಿದ್ದರು. ಅಲ್ಲದೆ, ಬಿಗ್‌ಬಾಸ್, ಇಂಡಿಯನ್ ನಂತಹ ರಿಯಾಲಿಟಿ ಶೋಗಳಲ್ಲೂ ಪಾಲ್ಗೊಂಡಿದ್ದರು. ಇದೀಗ ಹಲೋ ೧೨೩, ಬುಲ್ಲಿ ಮೂಲಕ ಭುವನ್ ಚಿತ್ರರಂಗಕ್ಕೆ ಮತ್ತೆ ‘ಕಮ್‌ಬ್ಯಾಕ್’ ಮಾಡುತ್ತಿದ್ದಾರೆ. -ಶಶಿ