ವೀರಾಜಪೇಟೆ, ಅ. ೭: ಪ್ರತಿಯೊಬ್ಬರು ಕಣ್ಣುಗಳ ಆರೋಗ್ಯದ ಕಡೆಗೆ ಗಮನಹರಿಸಬೇಕೆಂದು ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈಮುತ್ತು ಹೇಳಿದರು.

ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ವೀರಾಜಪೇಟೆಯ ಡಾ. ಅಗರ್ವಾಲ್ಸ್ ಕ್ಲಿನಿಕ್‌ನ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಣ್ಣು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು ಜೀವನದುದ್ದಕ್ಕೂ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಕಣ್ಣುಗಳ ರಕ್ಷಣೆಗಾಗಿ ನಿಗದಿತ ಸಮಯದಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸುವುದರ ಮೂಲಕ ಕಣ್ಣಿನ ರಕ್ಷಣೆಯನ್ನು ಮಾಡಬಹುದಾಗಿದೆ ಎಂದರು. ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಆರೋಗ್ಯದ ಬಗ್ಗೆ ಎಲ್ಲರಲ್ಲೂ ಜಾಗೃತಿ ಇರಬೇಕು ಎಂದರು. ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ.ಡಿ., ವೀರಾಜಪೇಟೆ ಡಾ. ಅಗರ್ವಾಲ್ಸ್ ಕ್ಲಿನಿಕ್‌ನ ವ್ಯವಸ್ಥಾಪಕ ಅರ್ಜುನ್ ದೇವಯ್ಯ, ಮೈಸೂರು ಡಾ. ಅಗರ್ವಾಲ್ಸ್ ಆಸ್ಪತ್ರೆಯ ಅನೈನಾ, ಆಲಿ ಮುಜಮಿಲ್ ಉಪಸ್ಥಿತರಿದ್ದರು. ತಪಾಸಣೆ ಬಳಿಕ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು.