ಈಶಾನ್ವಿ

ವೀರಾಜಪೇಟೆ, ಅ. ೩: ನೋವಿನ ನಡುವೆಯೂ ಆ್ಯಂಬುಲೆನ್ಸ್ನಲ್ಲಿ ಮಲಗಿರುವ ರೋಗಿ, ಮುಖದಲ್ಲಿ ಮೂಡಿರುವ ಕೃತಜ್ಞತಾ ಭಾವ, ದಿಕ್ಕೇ ತೋಚದಂತಾಗಿದ್ದ ದಯನೀಯ ಪರಿಸ್ಥಿತಿಯಲ್ಲಿ ಆಪತ್ಪಾಂದವರAತೆ ಕೈಹಿಡಿದು ಕಷ್ಟದ ಪರಿಸ್ಥಿತಿಯಿಂದ ತಮ್ಮನ್ನು ಪಾರುಮಾಡಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸುವ ತವಕ, ಆ್ಯಂಬುಲೆನ್ಸ್ ಬಳಿ ಬಂದ ಶಾಸಕರಿಗೆ ಹೂವಿನ ಹಾರ ಹಾಕಿ ಕೃತಜ್ಞತೆ ಅರ್ಪಿಸಿದ ಬಡಕುಟುಂಬ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ವೀರಾಜಪೇಟೆಯ ಗೃಹ ಕಚೇರಿ. ಈ ಒಂದು ಮನಕಲಕುವ ದೃಶ್ಯಕ್ಕೆ ಸಾಕ್ಷಿಯಾಯಿತು.

ವೀರಾಜಪೇಟೆ ಶಾಸಕ ಪೊನ್ನಣ್ಣ ಅವರ ವಿಶೇಷ ಕಾಳಜಿ ಹಾಗೂ ಪ್ರಯತ್ನದಿಂದ ಮಂಗಳೂರಿನ ಪ್ರತಿಷ್ಠಿತ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ಕೂಲಿ ಕಾರ್ಮಿಕ ಮಾಲ್ದಾರೆಯ ನಿವಾಸಿ ಶಿವಕುಮಾರ್ ಆಸ್ಪತ್ರೆಯ ಲಕ್ಷಾಂತರ ರೂಪಾಯಿಗಳ ಚಿಕಿತ್ಸಾ ವೆಚ್ಚ ಭರಿಸಲಾಗದೇ ಕಂಗಾಲಾಗಿದ್ದ ವೇಳೆ ೪.೫೦ ಲಕ್ಷ ರೂಪಾಯಿಗಳ ಮೇಲ್ಪಟ್ಟ ಚಿಕಿತ್ಸೆ ಮನ್ನಾ ಮಾಡಿಸಲು ನೆರವಾದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಆ್ಯಂಬುಲೆನ್ಸ್ನಲ್ಲೇ ಬಂದು ಭೇಟಿಯಾದರು.

ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೇ ಮುಂದೇನು..? ಎಂಬ ದುಗುಡದೊಂದಿಗೆ ದಿಕ್ಕೇ ತೋಚದಂತಾಗಿದ್ದ ಬಡ ಕುಟುಂಬಕ್ಕೆ ಆಸರೆಯ ಸಹಾಯ ಹಸ್ತ ಚಾಚಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಲು ಆಂಬುಲೆನ್ಸ್ನಲ್ಲೇ ರೋಗಿಯೊಂದಿಗೆ ಕುಟುಂಬಸ್ಥರು ಆಗಮಿಸಿದ್ದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಗೆ ನೂರಾರು ಮಂದಿ ಸಾರ್ವಜನಿಕರು ಅಹವಾಲು ಸಲ್ಲಿಸಲು ಆಗಮಿಸಿದ್ದರು. ಈ ನಡುವೆ ಶಾಸಕರಿಗೆ ಕೃತಜ್ಞತೆ ಸಲ್ಲಿಸಲು ಆ್ಯಂಬುಲೆನ್ಸ್ನಲ್ಲೇ ಆಗಮಿಸಿದ್ದ ರೋಗಿಯೊಬ್ಬರು ಗಮನ ಸೆಳೆದರು. ಮಾಲ್ದಾರೆಯ ನಿವಾಸಿ ಶಿವಕುಮಾರ್ ಎಂಬವರು ಕೂಲಿ ಕೆಲಸ ಮಾಡಿಕೊಂಡು ಬದುಕು ದೂಡುತ್ತಿದ್ದರು. ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಮರದಿಂದ ಬಿದ್ದು, ಬೆನ್ನು ಮೂಳೆ ಘಾಸಿಗೊಂಡಿದ್ದ ಶಿವಕುಮಾರ್ ಅವರಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಶಸ್ತçಚಿಕಿತ್ಸೆ ಮಾಡದಿದ್ದಲ್ಲಿ ರೋಗಿಯ ಜೀವಕ್ಕೆ ಆಪತ್ತು, ಕೂಡಲೇ ಒಂದು ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಆಸ್ಪತ್ರೆಯ ವೈದ್ಯರು ತಿಳಿಸಿದ ಮೇರೆಗೆ ರೋಗಿಯ ಕುಟುಂಬಸ್ಥರು ಸಾಲಸೋಲ ಮಾಡಿ ಒಂದು ಲಕ್ಷ ರೂಪಾಯಿಗಳನ್ನು ಪಾವತಿಸಿದ ಮೇರೆಗೆ ರೋಗಿಗೆ ಶಸ್ತçಚಿಕಿತ್ಸೆ ಮಾಡಿದ ಬಳಿಕ ಮೂರ್ನಾಲ್ಕು ದಿನಗಳ ಚಿಕಿತ್ಸೆ ನೀಡಿದ ಬಳಿಕ ಡಿಸ್‌ಚಾರ್ಜ್ ಮಾಡಲು ವೈದ್ಯರು ಸೂಚಿಸಿ, ಚಿಕಿತ್ಸಾ ವೆಚ್ಚ ಸುಮಾರು ೪ ರಿಂದ ೫ ಲಕ್ಷ ರೂಪಾಯಿಗಳನ್ನು ಭರಿಸುವಂತೆ ಸೂಚಿಸಿದ್ದಾರೆ.

ವೈದ್ಯರ ಮಾತು ಕೇಳಿ ಬಡ ಕುಟುಂಬಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ತಮ್ಮ ಬಳಿ ಬಿಪಿಎಲ್ ಕಾರ್ಡ್ ಇದೆ ಎಂದರು ಸಹ ಕೇಳದ ಆಸ್ಪತ್ರೆಯವರು ಬಿಲ್ ಪಾವತಿಸುವಂತೆ ಹೇಳಿ, ರೋಗಿಗೆ ನೀಡಲಾಗುತ್ತಿದ್ದ ಚಿಕಿತ್ಸೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಕಂಗಾಲಾದ ಶಿವಕುಮಾರ್ ಅವರ ಪುತ್ರ ತಮ್ಮ ಅಸಹಾಯಕ ಸ್ಥಿತಿಯ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಸಂಜು ಸುಬ್ಬಯ್ಯ ಅವರ ಮೂಲಕ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಶಾಸಕ ಪೊನ್ನಣ್ಣ ಅವರು ಬಿಪಿಎಲ್ ಕಾರ್ಡ್ ಇದ್ದರೂ ಸಹ ರೋಗಿಯ ಚಿಕಿತ್ಸಾ ವೆಚ್ಚ ಭರಿಸುವಂತೆ ಬಡ ಕುಟುಂಬಕ್ಕೆ ಆಸ್ಪತ್ರೆಯವರು ತಿಳಿಸಿದ ಬಗ್ಗೆ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಹರ್ಷಗುಪ್ತ ಅವರ ಗಮನಕ್ಕೆ ತಂದು ಸಾಮಾಜಿಕ ಕಾರ್ಯಕರ್ತರಾದ ಸಂಜು ಸುಬ್ಬಯ್ಯ ಅವರ ಮೂಲಕ ಸರಕಾರ ಲೀಗಲ್ ಅಥಾರೆಟಿಗೆ ದೂರು ಸಲ್ಲಿಸಿದ ಮೇರೆಗೆ ಆಸ್ಪತ್ರೆಗೆ ನೋಟೀಸ್ ಜಾರಿ ಮಾಡಿದ್ದರು. ಬಳಿಕ ಆಸ್ಪತ್ರೆಯವರು ರೋಗಿಯ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿಗಳ ಚಿಕಿತ್ಸಾ ವೆಚ್ಚ ಭರಿಸಲು ದಿಕ್ಕು ತೋಚದಂತಾಗಿದ್ದ ಬಡಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಶಿವಕುಮಾರ್ ಅವರ ಪತ್ನಿ, ಪುತ್ರ, ಹಾಗೂ ಸಹೋದರ ಕೂಡ ಶಾಸಕರ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.