ವೀರಾಜಪೇಟೆ, ಅ. ೩: ವೀರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ಪಡೆದಿರುವ, ‘ವ್ಯೂಪಾಯಿಂಟ್’ ಸ್ಥಳದ ವೀಕ್ಷಣೆ ಹಾಗೂ ಪರಿಶೀಲನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕೈಗೊಂಡರು.

ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪ್ರವಾಸಿಗರನ್ನು ಸೆಳೆಯಲು ಸೂಕ್ತ ಸ್ಥಳದಲ್ಲಿ ವ್ಯೂಪಾಯಿಂಟ್ ಸ್ಥಾಪಿಸುವ ಉದ್ದೇಶದ ಹಿನ್ನೆಲೆ ಇದಕ್ಕೆ ಸ್ಥಳವನ್ನು ಸಹ ಗುರುತಿಸಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಸರ್ಕಾರದಿಂದ ರೂ. ೧ ಕೋಟಿ ೭೪ ಲಕ್ಷ ಅನುಮೋದನೆ ದೊರಕಿದ್ದು, ಸ್ಥಳೀಯ ಪ್ರಮುಖರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಶಾಸಕರು, ಈ ಹಿಂದೆ ಮಲೆತಿರಿಕೆ ಬೆಟ್ಟದಲ್ಲಿ ಸ್ವಚ್ಛತೆಯನ್ನು ಕೈಗೊಂಡು ಇಲ್ಲಿಗೆ ಬರುವ ಪ್ರವಾಸಿಗರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಡಸ್ಟ್ಬಿನ್ ಅನ್ನು ಕೂಡ ಇಟ್ಟಿದ್ದೆವು. ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು. ವೀರಾಜಪೇಟೆ ಪಟ್ಟಣದ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ ಹಾಗೂ ಗುರಿ ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ವೀರಾಜಪೇಟೆ ಪುರಸಭೆಯ ಮಲೆತರಿಕೆ ಬೆಟ್ಟದಲ್ಲಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮತ್ತು ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲು ವ್ಯೂಪಾಯಿಂಟ್ ನಿರ್ಮಿಸಬೇಕೆಂದು ಮನವಿ ಮಾಡಿದ್ದ ಮೇರೆಗೆ ಶಾಸಕರು ಇದಕ್ಕೆ ಸ್ಪಂದಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬಸುಂ, ಪುರಸಭೆ ಸದಸ್ಯರಾದ ಎಸ್.ಹೆಚ್ ಮತೀನ್, ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಆಗಸ್ಟಿನ್ ಬಿನ್ನಿ, ಹಮೀದ್, ಆತಿಫ್, ಮನ್ನಾ, ದಿನೇಶ್, ಜೂನಾ, ತಹಶೀಲ್ದಾರ್ ಪ್ರವೀಣ್, ಕಂದಾಯ ಅಧಿಕಾರಿ ಹರೀಶ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.