ರೆಪೊ ದರ ಪ್ರಕಟಿಸಿದ ಆರ್ಬಿಐ
ನವದೆಹಲಿ, ಅ. ೧: ಆರ್ಬಿಐ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ. ೫.೫ರಷ್ಟು ಕಾಯ್ದುಕೊಂಡು ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ. ಅಮೇರಿಕಾದ ಸುಂಕದ ಸಮಸ್ಯೆಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆ ಕಾದು ನೋಡುವ ವಿಧಾನವನ್ನು ಅಳವಡಿಸಿಕೊಂಡಿದೆ. ಈ ನಿರ್ಧಾರವು ಈ ಹಿಂದೆ ನೀಡಲಾದ ೧೦೦ ಬೇಸಿಸ್ ಪಾಯಿಂಟ್ ಕಡಿತಗಳನ್ನು ಅನುಸರಿಸುತ್ತದೆ. ಈ ನಿರ್ಧಾರವು ವಿಶ್ಲೇಷಕರ ನಿರೀಕ್ಷೆಗಳಿಗೆ ಅನುಗುಣವಾಗಿದೆ. ಆಗಸ್ಟ್ ತಿಂಗಳ ನೀತಿ ಪರಿಶೀಲನೆಯ ನಂತರ, ಯುಎಸ್ ಸುಂಕಗಳು ಮತ್ತು ಇತರ ಜಾಗತಿಕ ಬೆಳವಣಿಗೆಗಳು ದೇಶೀಯ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ನಿರ್ಣಯಿಸಲು ಕಾದು ನೋಡುವ ತಂತ್ರ ಅನುಸರಿಸಿದೆ. ದರ ನಿಗದಿಪಡಿಸುವ ಸಮಿತಿಯು ತನ್ನ ಆರ್ಥಿಕ ವರ್ಷ ೨೦೨೬ರಲ್ಲಿ ಗ್ರಾಹಕ ಬೆಲೆ ಹಣದುಬ್ಬರ ಪ್ರಕ್ಷೇಪಣವನ್ನು ಶೇ. ೩.೭ ರಿಂದ ಶೇ. ೩.೧ಕ್ಕೆ ಇಳಿಸಿದೆ. ಆದಾಗ್ಯೂ, ತ್ರೆöÊಮಾಸಿಕ ೪ ಮತ್ತು ಅದಕ್ಕಿಂತ ಹೆಚ್ಚಿನ ಹೊತ್ತಿಗೆ ಹಣದುಬ್ಬರವು ಶೇ. ೪ ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ಜಾಗತಿಕ ಸುಂಕದ ಪ್ರಕ್ಷುಬ್ಧತೆಯ ಮೇಲೆ ಎಚ್ಚರಿಕೆಯ ಕಣ್ಣಿಟ್ಟಿದ್ದರೂ ಸಹ, ಸಮಿತಿಯು ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಸಹ ಉಳಿಸಿಕೊಂಡಿದೆ. ಆರು ಸದಸ್ಯರ ಸಮಿತಿಯು ರೆಪೊ ದರವನ್ನು ಶೇಕಡಾ ೫.೫ರಲ್ಲಿ ಇರಿಸಲು ಸರ್ವಾನುಮತದಿಂದ ಮತ ಚಲಾಯಿಸಿ, ತನ್ನ ತಟಸ್ಥ ನೀತಿ ನಿಲುವನ್ನು ಕಾಯ್ದುಕೊಂಡಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು.
ಫಿಲಿಪ್ಪೀನ್ಸ್ನಲ್ಲಿ ಪ್ರಬಲ ಭೂಕಂಪ - ೬೯ ಸಾವು
ಮನಿಲಾ, ಅ. ೧: ಫಿಲಿಪ್ಪೀನ್ಸ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಟ ೬೯ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ (ಸೆ.೩೦) ರಾತ್ರಿ ೧೦ರ ಸುಮಾರಿಗೆ ೬.೯ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರಿ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಗೊ ನಗರ ಹಾಗೂ ಸೆಬು ಪ್ರಾಂತ್ಯದ ಹೊರವಲಯದ ಪಟ್ಟಣಗಳಲ್ಲಿ ಮನೆ ಕಟ್ಟಡಗಳು ಹಾನಿಗೊಂಡಿವೆ ಎಂದು ಅವರು ಹೇಳಿದ್ದಾರೆ. ಅವಶೇಷಗಳಡಿಯಲ್ಲಿ ಬದುಕುಳಿದವರನ್ನು ರಕ್ಷಿಸಲು ರಕ್ಷಣಾ ಪಡೆಗಳು ಕಠಿಣ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಬೊಗೊದಿಂದ ಈಶಾನ್ಯಕ್ಕೆ ಸುಮಾರು ೧೯ ಕಿ.ಮೀ. ದೂರದಲ್ಲಿ ಐದು ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ
ನವದೆಹಲಿ, ಅ. ೧: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರಿ ನೌಕರರ ಹೆಚ್ಚುವರಿ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಪ್ರಸ್ತುತ ತುಟ್ಟಿ ಭತ್ಯೆ, ಪರಿಹಾರ ಮೊತ್ತವು ಮೂಲ ವೇತನ, ಪಿಂಚಣಿಯ ಶೇ. ೫೫ ರಷ್ಟಿದ್ದು, ಈಗ ಶೇ. ೩ ರಷ್ಟನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಬೆಲೆ ಏರಿಕೆಯನ್ನು ಸರಿದೂಗಿಸಲು ಈ ವರ್ಷದ ಜುಲೈ ೧ ರಿಂದ ಈ ಹೆಚ್ಚಳ ಪೂರ್ವಾನ್ವಯವಾಗಲಿದೆ. ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರ ಎರಡರ ಹೆಚ್ಚಳದಿಂದಾಗಿ ಬೊಕ್ಕಸದ ಮೇಲೆ ಒಟ್ಟಾರೆಯಾಗಿ ವಾರ್ಷಿಕ ರೂ. ೧೦೦೮೩. ೯೬ ಕೋಟಿ ಹೊರೆ ಬೀಳಲಿದೆ.
ನಿಗೂಢ ಸ್ಫೋಟದಲ್ಲಿ ಗಾಯಗೊಂಡಿದ್ದ ದಂಪತಿ ಸಾವು
ಹಾಸನ, ಸೆ. ೧: ಹಳೇ ಆಲೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುದರ್ಶನ್ (೩೨) ಮತ್ತು ಪತ್ನಿ ಕಾವ್ಯ (೨೭) ಮೃತ ದಂಪತಿ. ನಿಗೂಢ ಸ್ಫೋಟದಲ್ಲಿ ಗಾಯಗೊಂಡ ದಂಪತಿಯನ್ನು ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿAದ ಅವರನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಸೋಮವಾರ ತಡರಾತ್ರಿ ಅವರನ್ನು ತುರ್ತುಚಿಕತ್ಸಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುದರ್ಶನ್ ರಾತ್ರಿ ಕೊನೆಯುಸಿರೆಳೆದರೆ, ಪತ್ನಿ ಕಾವ್ಯ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇನ್ನು ೧೪ ತಿಂಗಳ ಮಗು ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಆರ್ಎಸ್ಎಸ್ಗೆ ೧೦೦ ವರ್ಷ - ೧೦೦ ರೂಪಾಯಿ ನಾಣ್ಯ ಬಿಡುಗಡೆ
ನವದೆಹಲಿ, ಅ. ೧: ರಾಷ್ಟಿçÃಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರೂ. ೧೦೦ ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ದೆಹಲಿಯ ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸಲಾಗಿದೆ. ಇದು ಬಹಳ ಹೆಮ್ಮೆ ಮತ್ತು ಐತಿಹಾಸಿಕ ಮಹತ್ವವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ೧೦೦ ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ರಾಷ್ಟಿçÃಯ ಲಾಂಛನವನ್ನು ಮತ್ತು ಇನ್ನೊಂದು ಬದಿಯಲ್ಲಿ ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಆಕೆಯ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುವ ಚಿತ್ರ ಮುದ್ರಿಸಲಾಗಿದೆ. ಅದರೊಂದಿಗೆ ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ೧೦೦ ವರ್ಷ ಎಂದು ಬರೆಯಲಾಗಿದೆ. ನಾಣ್ಯದ ಮೇಲೆ ಆರ್ಎಸ್ಎಸ್ ಧ್ಯೇಯ ವಾಕ್ಯವನ್ನು ಸಹ ಮುದ್ರಿಸಲಾಗಿದೆ.
ಗಾಯತ್ರಿ ಪ್ರಜಾಪತಿ ಮೇಲೆ ಹಲ್ಲೆಗೈದ ಖೈದಿ
ಲಖನೌ, ಅ. ೧: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಹಿರಿಯ ನಾಯಕ ಗಾಯತ್ರಿ ಪ್ರಜಾಪತಿ ಅವರ ಮೇಲೆ ಜೈಲಿನ ಆಸ್ಪತ್ರೆಯಲ್ಲಿ ಖೈದಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ನಮ್ಮ ತಂದೆಯನ್ನು ಕೊಲ್ಲಲು ನಡೆದಿರುವ ವ್ಯವಸ್ಥಿತ ಪಿತೂರಿ ಇದಾಗಿದೆ. ಲಖನೌದ ಜೈಲಿನಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಬೇರೆ ಕಡೆಗೆ ಸ್ಥಳಾಂತರ ಮಾಡುವುದು ಸೂಕ್ತ. ಜತೆಗೆ, ಸೂಕ್ತ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಪ್ರಜಾಪತಿ ಅವರ ಮಗಳು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿರುವ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಪ್ರಜಾಪತಿ ಮೇಲಿನ ದಾಳಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆ ನಡೆದ ಕೂಡಲೇ ಪ್ರಜಾಪತಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.