ಸೋಮವಾರಪೇಟೆ, ಸೆ. ೨೧: ಇಲ್ಲಿನ ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಲ್ಪೊಳ್ದ್ ಸಂತೋಷ ಕೂಟವು ಕೊಡವ ಸಮುದಾಯದವರ ಸಂಭ್ರಮದ ಕ್ಷಣಗಳಿಗೆ ವೇದಿಕೆಯಾಯಿತು.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸಂತೋಷ ಕೂಟಕ್ಕೆ ಚಾಲನೆ ನೀಡಲಾಯಿತು. ಈಗಾಗಲೇ ವಿಶೇಷವಾಗಿ ಕೊಡವ ಸಮುದಾಯದವರು ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸಿದ್ದು, ಇದೀಗ ಕೊಡವ ಸಮಾಜದ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂತೋಷಕೂಟ ಆಯೋಜಿಸಿದ್ದರಿಂದ ಸಂಭ್ರಮ ಮನೆ ಮಾಡಿತ್ತು. ಸಮುದಾಯದ ಮಂದಿಗೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಮಹಿಳೆಯರಾದಿಯಾಗಿ ಕೊಡವರು ಒಂದೆಡೆ ಕಲೆತು ಸಂಭ್ರಮಿಸಿದರು.
ಸಾಧಕ-ಬಾಧಕ ಚರ್ಚೆ ಅಗತ್ಯ: ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಅವರು, ಜಾತಿಸಮೀಕ್ಷೆಯಲ್ಲಿ ಗೊಂದಲ ಏರ್ಪಟ್ಟಿದೆ. ಹಿಂದೂ ಸಂಪ್ರದಾಯದAತೆ ಕೊಡವರು ಬದುಕು ನಡೆಸುತ್ತಿದ್ದಾರೆ. ದೇವರ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇದೀಗ ಕೆಲವರು ಸಮೀಕ್ಷೆಯ ಧರ್ಮ ಕಾಲಂನಲ್ಲಿ ಕೊಡವ ಎಂದು ಇನ್ನು ಕೆಲವರು ಹಿಂದೂ ಎಂದು ನಮೂದಿಸಲು ಹೇಳುತ್ತಿದ್ದಾರೆ. ಈ ಬಗ್ಗೆ ವಿಸ್ತೃತ ಚರ್ಚೆ ಹಾಗೂ ಆಗಬಹುದಾದ ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಬೇಕೆಂದು ಅಬಿಪ್ರಾಯಿಸಿದರು.
ಈವರೆಗೆ ನಮ್ಮ ಪೂರ್ವಿಕರು, ನಾವು ಹಾಗೂ ನಮ್ಮ ಮಕ್ಕಳ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ದಾಖಲಾಗಿದೆ. ಇದೀಗ ಸಮೀಕ್ಷೆಯಲ್ಲಿ ಹೊಸದಾಗಿ ಕೊಡವ ಧರ್ಮ ಎಂದು ದಾಖಲಿಸಿದರೆ ಈವರೆಗಿನ ಎಲ್ಲಾ ದಾಖಲೆಗಳೂ ಬದಲಾಗಬೇಕಿವೆ. ಧರ್ಮವನ್ನು ದಾಖಲೆಗಳಲ್ಲಿ ಬದಲಾಯಿಸಲು ನ್ಯಾಯಾಲಯದ ಮೂಲಕವೇ ಆಗಬೇಕಿದೆ.
ಅಷ್ಟಕ್ಕೂ ಧರ್ಮದ ಶೆಡ್ಯೂಲ್ನಲ್ಲಿ ಕೊಡವ ಧರ್ಮ ಎಂಬುದಿಲ್ಲ. ಒಂದು ವೇಳೆ ನಾವು ಕೊಡವ ಧರ್ಮ ಎಂದು ನಮೂದಾದರೆ ಆಡಳಿತಾತ್ಮಕವಾಗಿ “ಇತರರು” ಎಂದು ನಮೂದಾಗುತ್ತದೆಯೇ ಎಂಬುದರ ಬಗ್ಗೆಯೂ ಚಿಂತಿಸಬೇಕು. ಒಂದು ವೇಳೆ ಇತರರು ಎಂದಾದರೆ ನಮಗೆ ಕೊಡವ ಅಥವಾ ಹಿಂದೂ ಧರ್ಮವೂ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಗಂಭೀರ ಚಿಂತನೆ ಆಗಬೇಕು : ಸುಬ್ರಮಣಿ
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸಂತೋಷಕೂಟವನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೀರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು, ಕೊಡವ ಸಮುದಾಯದವರು ಸಹಜೀವನ, ಶಿಸ್ತಿನ ಜೀವನಕ್ಕೆ ಹೆಸರಾದವರು. ಸಮೀಕ್ಷೆಯ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಕೊಡವ ಧರ್ಮವನ್ನು ಅಧಿಕೃತಗೊಳಿಸಲು ಸಮೀಕ್ಷೆ ಸಹಕಾರಿಯಾಗಿದೆ. ಈ ಬಗ್ಗೆ ಗಂಭೀರ ಚರ್ಚೆ ಆಗಬೇಕು ಎಂದು ಅಭಿಪ್ರಾಯಿಸಿದರು.
ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ನಾವು ಎಡವಿದ್ದೇವೆ. ಆದ್ದರಿಂದ ಇಂದಿಗೂ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಪಾರ್ಸಿ ಜನಾಂಗಕ್ಕೆ ಸರ್ಕಾರವೇ ಸೌಲಭ್ಯ ನೀಡುತ್ತಿದೆ. ಧರ್ಮ ಪ್ರತ್ಯೇಕವಾದರೆ ದೇವಸ್ಥಾನಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಕೊಡವರು ಸೂಕ್ಷಾö್ಮತಿಸೂಕ್ಷö್ಮ ಜನಾಂಗ. ಪ್ರತ್ಯೇಕ ಧರ್ಮದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಕೊಡವ ಧರ್ಮ ಸ್ಥಾಪನೆ ಬಗ್ಗೆ ಚಿಂತಿಸಬೇಕು. ಹಾಗಾದಾಗ ಸರ್ಕಾರದಿಂದ ಸೌಲಭ್ಯ, ಮೀಸಲಾತಿ, ಸಹಾಯಧನ ಪಡೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೇರ ಎ. ನೆಹರು ಮಾತನಾಡಿ, ಸಮಾಜ ಸದಾ ಚಟುವಟಿಕೆಯಿಂದಿರಬೇಕು. ಜನಸಂಖ್ಯೆ ಕಡಿಮೆಯಿದ್ದರೂ ಸಂಸ್ಕೃತಿ ಆಚರಣೆ ಮಾಡಬೇಕು. ಕೊಡವರು ಸರ್ಕಾರಿ ಕೆಲಸದ ಬದಲಿಗೆ ಖಾಸಗಿಯತ್ತ ಒಲವು ತೋರುತ್ತಿದ್ದಾರೆ. ಇದು ಸರಿಯಲ್ಲ;ಸರ್ಕಾರಿ ಕೆಲಸ ಪಡೆಯಲು ಪ್ರಯತ್ನ ಪಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಈ ಬಗ್ಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು. ಕೊಡವರು ಆಸ್ತಿಯನ್ನು ಮಾರಾಟ ಮಾಡಬಾರದು. ಭೂಮಿ ಮಾರಾಟವಾದರೆ ಸಂಸ್ಕೃತಿಯ ಕೊಂಡಿ ಕಳಚುತ್ತದೆ. ಸೂರ್ಲಬ್ಬಿ ನಾಡಿನ ಮಂದಿ ಎಷ್ಟೇ ಕಷ್ಟದಲ್ಲಿದ್ದರೂ, ತರಕಾರಿ ಬೆಳೆದು ಜೀವನ ಸಾಗಿಸಿದರೂ ಭೂಮಿಯನ್ನು ಮಾರಾಟ ಮಾಡಿಲ್ಲ. ಸಂಸ್ಕೃತಿ ಮರೆತಿಲ್ಲ; ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು. ಇದೇ ಸಂದರ್ಭ ಕೊಡವ ಸಮಾಜದ ವಿದ್ಯಾನಿಧಿಗೆ ೨೫ ಸಾವಿರ ರೂ ದೇಣಿಗೆ ನೀಡಿದರು.
ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಬೊಳಂದAಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್, ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಉಪಸ್ಥಿತರಿದ್ದರು. ಹಂಚೆಟ್ಟಿರ ಸಾರಿಕ ತಿಮ್ಮಯ್ಯ, ಮಚ್ಚಂಡ ಪ್ರಕಾಶ್, ಮಲ್ಲಾಜೀರ ನೇಹಾ ದೇಚಮ್ಮ, ಬಾಚಿನಾಡಂಡ ರೋಶ್ನಿ ಪ್ರದೀಪ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.