ವಾಷಿಂಗ್ಟನ್, ಸೆ. ೨೧: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ವಿದೇಶಿಗರು ಹೆಚ್-೧ಬಿ ವೀಸಾ ಆಧಾರದಲ್ಲಿ ಕೆಲಸ ಮಾಡಬೇಕಿದ್ದಲ್ಲಿ ಅವರುಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಮೇರಿಕಾದ ಸಂಸ್ಥೆಗಳು ವಾರ್ಷಿಕವಾಗಿ ೧ ಲಕ್ಷ ಡಾಲರ್ ಅಥವಾ ರೂ.೮೮.೧೩ ಲಕ್ಷವನ್ನು ಅಲ್ಲಿನ ಸರಕಾರಕ್ಕೆ ಪಾವತಿಸುವಂತೆ ಯು.ಎಸ್.ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಆದೇಶದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ.
ಹೊಸ ಆದೇಶಕ್ಕೆ ವ್ಯಕ್ತವಾದ ವ್ಯಾಪಕ ವಿರೋಧದ ನಡುವೆ ವೈಟ್ ಹೌಸ್(ಅಮೇರಿಕಾದ ಆಡಳಿತ ಭವನ) ಮಾಧ್ಯಮ ಕಾರ್ಯದರ್ಶಿ ಹಾಗೂ ಟ್ರಂಪ್ನ ಸಹಾಯಕಿಯೂ ಆಗಿರುವ ಕ್ಯಾರೋಲೈನ್ ಲಿಯಾವಿಟ್ ಅವರು ಈ ಸಂಬAಧ ಸ್ಪಷ್ಟನೆ ನೀಡಿದ್ದಾರೆ.
ತಾ.೧೯ರಂದು ಹೊರಡಿಸಿದ ಆದೇಶದಲ್ಲಿ ಹೊಸದಾಗಿ ಹೆಚ್ ೧-ಬಿ ವೀಸಾ ಪಡೆಯುವವರಲ್ಲದೆ ಈಗಾಗಲೇ ಅಮೇರಿಕಾದಲ್ಲಿರುವ ವಿದೇಶಿ ಉದ್ಯೋಗಿಗಳೂ ಕೂಡ ವಾರ್ಷಿಕ ವೀಸಾ ನವೀಕರಣಕ್ಕೆ ಬರೋಬ್ಬರಿ ರೂ.೮೮ ಲಕ್ಷ ನೀಡುವಂತೆ ವಿವರಿಸಲಾಗಿತ್ತು. ಇದೀಗ ಇದನ್ನು ಬದಲಾಯಿಸಲಾಗಿದ್ದು, ಹೆಚ್ ೧-ಬಿ ನವೀಕರಣಕ್ಕೆ ಈ ಹಿಂದಿನ ಮೊತ್ತವನ್ನೇ ನೀಡುವ ಪದ್ಧತಿಯನ್ನು ಮುಂದುವರಿಸುವುದಾಗಿ ಹಾಗೂ ಅಮೇರಿಕಾದಲ್ಲಿ ಹೊಸದಾಗಿ ಹೆಚ್ ೧-ಬಿ ವೀಸಾ ಪಡೆಯುವವರಿಗೆ ಮಾತ್ರ ಹೊಸ ಮೊತ್ತವಾದ ರೂ.೮೮ ಲಕ್ಷ ಅನ್ವಯವಾಗಲಿದೆ. ಈ ಮೊತ್ತ ವಾರ್ಷಿಕವಲ್ಲ, ಕೇವಲ ಒಂದು ಬಾರಿಯ ಮೊತ್ತವೆಂದು ಕ್ಯಾರೋಲೈನ್ ಲಿಯಾವಿಟ್ ಅವರು ತಿಳಿಸಿದ್ದಾರೆ.