ಮಡಿಕೇರಿ, ಸೆ. ೨೧: ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ವೈಭವದ ವಾತಾವರಣ ಮನೆ ಮಾಡಿದ್ದು, ತಾ. ೨೨ ರಿಂದ ೧೧ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಸಾಂಸ್ಕೃತಿಕ ರಾಜಧಾನಿ ಮೈಸೂರು ದಸರಾವನ್ನು ಸ್ವಾಗತಿಸಿದರೆ, ಮಂಜಿನನಗರಿ ಮಡಿಕೇರಿ ಬೀಳ್ಕೊಡುತ್ತದೆ ಎಂಬ ಮಾತಿದೆ. ಅದರಂತೆ ಈ ವರ್ಷವೂ ಅದ್ದೂರಿ ಆಚರಣೆಗೆ ಸರ್ವ ತಯಾರಿ ಭರದಿಂದ ಸಾಗುತ್ತಿದೆ. ನೂರಾರು ವರ್ಷಗಳ ಐತಿಹ್ಯ ಹೊಂದಿರುವ ಮಡಿಕೇರಿ ದಸರಾ ಉತ್ಸವಕ್ಕೆ ಕರಗೋತ್ಸವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ದೊರೆತು ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ತೆರೆ ಬೀಳುತ್ತದೆ.

ಕರಗೋತ್ಸವದೊಂದಿಗೆ ಶುಭಾರಂಭ

ತಾ. ೨೨ ರಂದು (ಇಂದು) ನಗರದ ಪಂಪಿನಕೆರೆಯಲ್ಲಿ ಕರಗೋತ್ಸವದ ಮೂಲಕ ದಸರೆಗೆ ಮುನ್ನುಡಿ ಇಡಲಾಗುವುದು. ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವಾಲಯದ ಕರಗಗಳಿಗೆ ಪೂಜೆ ಸಲ್ಲಿಸಿ ವ್ರತಧಾರಿಗಳು ಅವುಗಳನ್ನು ಹೊತ್ತುಕೊಂಡು ಸಾಗುವ ಮೂಲಕ ದಸರಾ ಶುಭಾರಂಭಗೊಳ್ಳುತ್ತದೆ.

ರಾಜರ ಕಾಲದಲ್ಲಿ ಸಾಂಕ್ರಾಮಿಕ ಕಾಯಿಲೆ ಬಾಧಿಸಿದ್ದ ಸಮಯದಲ್ಲಿ ಕರಗೋತ್ಸವವನ್ನು ಆರಂಭಿಸಲಾಯಿತು. ಅಂದಿನಿAದ ಇಂದಿನ ತನಕ ದಸರಾ ಸಂದರ್ಭದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ೪ ಶಕ್ತಿ ದೇವಾಲಯದ ಕರಗಗಳು ಮಡಿಕೇರಿ ದಸರೆಯ ಆಸ್ಮಿತೆಯಾಗಿವೆ.

ಈ ಬಾರಿ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಪಿ. ಚಾಮಿ, ದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಜಿ.ಎ. ಉಮೇಶ್, ಕಂಚಿ ಕಾಮಾಕ್ಷಿ ದೇವಾಲಯದ ಕರಗವನ್ನು ಪಿ.ಸಿ. ಉಮೇಶ್, ಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಅನೀಶ್ ಹೊರಲಿದ್ದಾರೆ. ತಾ. ೨೧ ರಂದು (ಇಂದು) ಕರಗಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ ದಸರಾಕ್ಕೆ ಮುಂದಡಿ ಇಡಲಾಗುವುದು.

ಆಯಾ ದೇವಾಲಯಗಳಿಂದ ಕರಗಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮಹದೇವಪೇಟೆ ಬಳಿಯ ಪಂಪಿನ ಕೆರೆಗೆ ಕೊಂಡೊಯ್ದು ಕರಗ ೪ಏಳನೇ ಪುಟಕ್ಕೆ ಸಿದ್ಧಪಡಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ಕರಗಗಳ ಪ್ರದಕ್ಷಿಣೆ ಆರಂಭಗೊಳ್ಳಲಿದ್ದು, ಆ ಮೂಲಕ ದಸರಾ ಹಬ್ಬಕ್ಕೆ ಚಾಲನೆ ಸಿಗಲಿದೆ. ದಸರೆಯ ವಿವಿಧ ದಿನಗಳು ನಗರದಲ್ಲಿ ಕರಗಗಳು ಪ್ರದಕ್ಷಿಣೆ ಹಾಕುತ್ತವೆ.

ರಂಗೋಲಿ ರಂಗು

ಕರಗ ಹೊರಡುವ ದಿನವನ್ನು ಮತ್ತಷ್ಟು ಆಕರ್ಷಕಗೊಳಿಸಲು ಅಲಂಕಾರ ಸಮಿತಿ ಹಾಗೂ ದಶಮಂಟಪ ಸಮಿತಿ ರಂಗೋಲಿ ಸ್ಪರ್ಧೆಯನ್ನು ಆಯೋಜನೆ ಮಾಡಿದೆ.

ದಶಮಂಟಪ ಸಮಿತಿಯಿಂದ ಕರಗ ಹೊರಡುವ ದಿನದಂದು ಮನೆ ಹಾಗೂ ಅಂಗಡಿಗಳ ಮುಂದೆ ರಂಗೋಲಿ ಬಿಡಿಸುವ ಸ್ಪರ್ಧೆಯೊಂದಿಗೆ ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಲಂಕಾರ ಸಮಿತಿಯೂ ರಂಗೋಲಿ ಹಾಗೂ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಿದೆ ಅಲ್ಲದೆ ಬನ್ನಿಮಂಟಪದಿAದ ಪೇಟೆ ರಾಮಮಂದಿರ ತನಕ ಬಣ್ಣದ ರಂಗೋಲಿ ಹಾಗೂ ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯಲಿದೆ ಅ. ೧ ರ ಆಯುಧ ಪೂಜೆಯಂದು ವಾಹನ ಅಲಂಕಾರ ಹಾಗೂ ಕಟ್ಟಡ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲು ಸಮಿತಿಗಳು ನಿರ್ಧರಿಸಿವೆ.

ಸಾಂಸ್ಕೃತಿಕ ವೈವಿಧ್ಯ

ದಸರಾಕ್ಕೆ ಸಾಂಪ್ರದಾಯಿಕ ಚಾಲನೆ ದೊರೆತ ಬಳಿಕ ಮರುದಿನ ಅಂದರೆ ತಾ. ೨೨ ರಿಂದ ವಿಜಯದಶಮಿಯ ದಿನವಾದ ಅ. ೨ ರ ತನಕ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಸದೌತಣ ನೀಡಲಿವೆ.

ಈ ಬಾರಿ ೧೧ ದಿನಗಳು ದಸರಾ ಆಚರಣೆ ನಡೆಯುವ ಕಾರಣದಿಂದ ೧೦ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸರಕಾರ ರೂ. ೧.೫೦ ಕೋಟಿ ಅನುದಾನವನ್ನು ಆಚರಣೆಗೆ ನೀಡಿದ್ದು, ಇದನ್ನು ಬಳಸಿಕೊಂಡು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಡಿಕೇರಿ ನಗರ ದಸರಾ ಸಮಿತಿ ಆಯೋಜನೆ ಮಾಡುತ್ತಿದೆ.

ಇದರಲ್ಲೂ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತವೆ. ಈ ಬಾರಿಯೂ ೧೦ ದಿನಗಳು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಆಕರ್ಷಕ ಕಲಾ ಸಂಭ್ರಮ ವೇದಿಕೆ ನಗರದ ಗಾಂಧಿ ಮೈದಾನದಲ್ಲಿ ಸಿದ್ಧವಾಗುತ್ತಿದೆ.

ಸಾಂಸ್ಕೃತಿಕ ವೈವಿಧ್ಯದೊಂದಿಗೆ ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ಜಾನಪದ ದಸರಾ, ಕಾಫಿ ದಸರಾ, ಕವಿಗೋಷ್ಠಿ, ಕಟ್ಟಡ ಅಲಂಕಾರ, ರಂಗೋಲಿ ಸ್ಪರ್ಧೆ ಹೀಗೆ ನಾನಾ ಕಾರ್ಯಕ್ರಮಗಳು ಆಕರ್ಷಣೆಗೆ ಸಿದ್ಧವಾಗುತ್ತಿವೆ. ಈ ಬಾರಿ ಯುವ ದಸರಾ ಸಂದರ್ಭ ಶ್ವಾನ ಪ್ರದರ್ಶನ ಸ್ಪರ್ಧೆ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಕವಿಗೋಷ್ಠಿಯಲ್ಲಿ ಈ ಬಾರಿ ೭೭ ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದು, ಇವುಗಳ ಸಂಗ್ರಹದ ಕವನಸಂಕಲನವನ್ನು ಕವಿಗೋಷ್ಠಿ ಸಮಿತಿ ಹೊರತರಲಿದೆ.

ಕಲಾತ್ಮಕ ಅಂಶಗಳೊAದಿಗೆ ಕ್ರೀಡಾಕೂಟಗಳು ದಸರಾಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ತಾ. ೨೨ ರಂದು ಮ್ಯಾರಥಾನ್ ಆಯೋಜಿಸಲಾಗಿದ್ದು, ಬಾಸ್ಕೆಟ್ ಬಾಲ್, ಕಬಡ್ಡಿ, ವಾಲಿಬಾಲ್, ಅಥ್ಲೆಟಿಕ್ಸ್, ಮನರಂಜನಾ ಕ್ರೀಡೆ, ಸ್ನೂಕರ್ ಸೇರಿದಂತೆ ಹತ್ತು ಹಲವು ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.

ಕಲಾಸಂಭ್ರಮ ವೇದಿಕೆ

ರೂ. ೫೮ ಲಕ್ಷ ವೆಚ್ಚದಲ್ಲಿ ಕಲಾ ಸಂಭ್ರಮ ವೇದಿಕೆ ಸಿದ್ಧವಾಗುತ್ತಿದೆ. ೪ ರಿಂದ ೫ ಸಾವಿರ ಮಂದಿಗೆ ಆಸನ ವ್ಯವಸ್ಥೆ, ೧ ಸಾವಿರ ಚದರ ಅಡಿಯ ಎಲ್‌ಇಡಿ ಪರದೆ. ವಿಶೇಷ ಎಫೆಕ್ಟ್ಗಳೂ, ಸೌಂಡ್ ಸಿಸ್ಟಂ ಜೊತೆಗೆ ನಗರದ ಸುದರ್ಶನ ವೃತ್ತದಿಂದ ಚೌಕಿ ತನಕ ವಿದ್ಯುತ್ ದೀಪಾಲಂಕಾರ, ದಶ ದೇವಾಲಯಗಳಲ್ಲಿ ಟ್ಯೂಬ್‌ಲೈಟ್ ಅಳವಡಿಕೆ, ಕಾಲುದಾರಿ ಹಾಗೂ ಜನನಿಬಿಡ ಪ್ರದೇಶಗಳಲ್ಲೂ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಕರಗೋತ್ಸವದಂದು ಪಂಪಿನ ಕೆರೆಯಿಂದ ಪೇಟೆ ಶ್ರೀರಾಮ ಮಂದಿರ ತನಕ ದೀಪಾಲಂಕಾರ ಮಾಡಲಾಗುವುದು.