ಪೊನ್ನಂಪೇಟೆ, ಸೆ. ೨೧: ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಳ್ಳಿಗಟ್ಟು ಗ್ರಾಮದ ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಶ್ರೀ ಭದ್ರಕಾಳಿ ಹಾಗೂ ಶ್ರೀ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಾವಿರಾರು ವರ್ಷಗಳ ಇತಿಹಾಸವಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನಮ್ಮ ಪೂರ್ವಿಕರ ಕಾಲದಿಂದಲೇ ದುರ್ಗಾ ಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಇದೇ ತಾ. ೨೨ ರಿಂದ ಅ. ೧ ರವರೆಗೆ ಪ್ರತಿನಿತ್ಯ ಸಂಜೆ ೭ ಗಂಟೆಗೆ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ವಿಜಯದಶಮಿಯ ಕೊನೆಯದಿನವಾದ ಅ. ೧ ರಂದು ವಿಶೇಷ ಮಹಾಪೂಜೆ ನಡೆಯಲಿದ್ದು, ಅಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ಬೆಳಗ್ಗೆ ೧೦.೩೦ ರಿಂದ ಶ್ರೀ ಭದ್ರಕಾಳಿ ದೇವರ ದರ್ಶನ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

ತಾ. ೨೨ರಂದು ರಾತ್ರಿ ೭ ಗಂಟೆಗೆ ಊರುತಕ್ಕರಾದ ಚಮ್ಮಟೀರ ಕುಟುಂಬಸ್ಥರ ಪೂಜೆ, ತಾ.೨೩ ರಂದು ಮೂಕಳೇರ ಹಾಗೂ ತಾ.೨೪ ರಂದು ಮಚ್ಚಿಯಂಡ ಕುಟುಂಬಸ್ಥರ ಪೂಜೆಯ ಬಳಿಕ ತಾ.೨೫ ರಿಂದ ಅಕ್ಟೋಬರ್ ೧ರವರೆಗೆ ಸಾರ್ವಜನಿಕರು ಪೂಜೆ ಮಾಡಿಸಬಹುದಾಗಿದೆ.