ಗೋಣಿಕೊಪ್ಪಲು, ಸೆ. ೧೯ : ಹುಲಿ ದಾಳಿ ನಡೆಸಿ ಗಬ್ಬದ ಹಸುವನ್ನು ಕೊಂದ ಘಟನೆ ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ಅಜ್ಜಮಾಡ ಲೂಹಿ ಪೂಣಚ್ಚ ಅವರಿಗೆ ಸೇರಿದ ಗಬ್ಬದ ಹಸುವನ್ನು ಮನೆಯ ಅನತಿ ದೂರದ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿಯು ದಾಳಿ ನಡೆಸಿದೆ.
ಕೆಲ ದಿನಗಳ ಹಿಂದೆ ಮಾಲೀಕರ ಕರು ಕೂಡ ಕಾಣೆಯಾಗಿದ್ದ್ದು ಹುಲಿಯು ಕೊಂದಿರಬಹುದಾಗಿದೆ ಎಂದು ಅಂದಾಜಿಸಲಾಗಿತ್ತು. ಹುಲಿಯ ಸೆರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಸರ್ಕಾರದ ಪರಿಹಾರ ಹಣ ಅಗತ್ಯವಿಲ್ಲ ಎಂದು ಹಸುವಿನ ಮಾಲೀಕರು ತಮ್ಮ ಅಸಮಾಧಾನ ಹೊರ ಹಾಕಿದರು.
ಮಾಹಿತಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್ ಮುಂದಾಳತ್ವದಲ್ಲಿ ರೈತ ಮುಖಂಡರುಗಳಾದ ಚಟ್ಟಂಗಡ ಕಂಬ ಕಾರ್ಯಪ್ಪ, ಉಳುವಂಗಡ ಜೀವನ್, ದಾದ ಕಾರ್ಯಪ್ಪ, ಕಾಳಿಮಾಡ ತಮ್ಮು ಮುತ್ತಣ್ಣ, ಮತ್ತಿತರರು ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹುಲಿಯ ಸೆರೆಗೆ ಒತ್ತಡ ಹಾಕಿದರು.
ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಮಾತನಾಡಿ, ಈಗಾಗಲೇ ಹುಲಿಯ ಸೆರೆಗೆ ಬೇಕಾದ ಅನುಮತಿ ಇಲಾಖೆಯ ಅಧಿಕಾರಿಗಳ ಬಳಿ ಲಭ್ಯವಿದೆ. ಹುಲಿಯನ್ನು ಡಾಟ್ ಮಾಡುವ ಮೂಲಕ ಸೆರೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಹುಲಿಯು ಹಸುವಿನ ಬಳಿ ಬಂದಿರುವ ಬಗ್ಗೆ ಕ್ಯಾಮರಾದಲ್ಲಿ ಚಿತ್ರ ಸೆರೆ ಆಗಿರುವುದರಿಂದ ರಾತ್ರಿಯ ವೇಳೆ ಮತ್ತೆ ಹುಲಿಯ ಆಗಮನ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹುಲಿಯ ಸೆರೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ಅಧಿಕಾರಿಗಳ ತಂಡ ಮಾಡಿಟ್ಟುಕೊಳ್ಳಲು ಸೂಚನೆ ನೀಡಿದರು. ಭೇಟಿಯ ವೇಳೆ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಶ್ರೀಮಂಗಲ ವಲಯ ಅರಣ್ಯ ಅಧಿಕಾರಿ ಅರವಿಂದ್, ಸಿಬ್ಬಂದಿಗಳು ಹಾಜರಿದ್ದರು.