ಮಡಿಕೇರಿ, ಸೆ. ೧೯: ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ಒಟ್ಟು ರೂ. ೨.೨೫ ಕೋಟಿ ಅನುದಾನವನ್ನು ಸರಕಾರ ಅಧಿಕೃತವಾಗಿ ಮಂಜೂರುಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ದಸರಾಕ್ಕೆ ರೂ. ೧.೫೦ ಕೋಟಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ರೂ. ೭೫ ಲಕ್ಷ ಮೀಸಲಿಟ್ಟು ಅದನ್ನು ಕೊಡಗು ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಅನುದಾನ ಬಳಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ನಿಗದಿತ ಉದ್ದೇಶಕ್ಕೆ ಹಣ ಬಳಸಿ ಲೆಕ್ಕಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪಟ್ಟಿ ಹಾಗೂ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.