ನಾಪೋಕ್ಲು, ಸೆ. ೧೯: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹಮ್ಮಿಕೊಂಡಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಉಪನ್ಯಾಸಕರು ಹಾಗೂ ಮೈಸೂರು ಜಿಲ್ಲೆಯ ಸಮೀಕ್ಷೆಯ ತರಬೇತುದಾರರು ಆಗಿರುವ ಪಟ್ಟಡ ಶಿವಕುಮಾರ್ ಕರೆ ನೀಡಿದರು.
ಅವರು ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪುತ್ತೂರಿನ ಒಕ್ಕಲಿಗರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮೀಕ್ಷೆಯ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ವಾಸ್ತವಿಕ ಮಾಹಿತಿಯನ್ನು ಒದಗಿಸುವ ಮೂಲಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಸಮೀಕ್ಷೆಯು ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೭ ರವರೆಗೆ ನಡೆಯಲಿದ್ದು, ಆ ಸಂದರ್ಭದಲ್ಲಿ ಒದಗಿಸಬೇಕಾದ ಮಾಹಿತಿಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಮೀಕ್ಷೆಯು ಅತ್ಯಂತ ವೈಜ್ಞಾನಿಕವಾಗಿ ನಡೆಯಲಿದ್ದು, ಹಿಂದುಳಿದ ವರ್ಗಗಳು ಸರ್ಕಾರದ ಸೌಲಭ್ಯಗಳನ್ನು ಎಷ್ಟರಮಟ್ಟಿಗೆ ಸದುಪಯೋಗಪಡಿಸಿಕೊಂಡಿವೆ, ಮುಂದೆ ಸರ್ಕಾರ ಯಾವ ಕ್ರಮಗಳ ಮೂಲಕ ಈ ವರ್ಗಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂಬುದರ ಬಗ್ಗೆ ಈ ಸಮೀಕ್ಷೆ ಮಾರ್ಗದರ್ಶನ ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಾಜಿ ಅವರು ಮಾತನಾಡಿ ಅರೆಭಾಷೆಗಾಗಿ ಸರ್ಕಾರ ಅಕಾಡೆಮಿಯನ್ನು ರಚಿಸಿದ್ದು, ಈ ಸಮೀಕ್ಷೆಯ ಸಂದರ್ಭದಲ್ಲಿ ಅರೆ ಭಾಷೆಯನ್ನು ಮಾತನಾಡುವವರು, ಭಾಷೆಯ ಕಲಂ ನಲ್ಲಿ ಅರೆ ಭಾಷೆಯನ್ನು ನಮೂದಿಸುವುದರಿಂದ, ಈ ಭಾಷೆಯನ್ನು ಮಾತನಾಡುವವರ ನಿಖರ ಸಂಖ್ಯೆ ದೊರೆಯಲಿದ್ದು, ಹಾಗೂ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಅಂಕಿ ಅಂಶ ದೊರೆಯಲಿದ್ದು, ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಸಹಾಯಕವಾಗುತ್ತದೆ. ಆದುದರಿಂದ ಸಮುದಾಯದ ಪ್ರತಿಯೊಬ್ಬರು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾಕ್ಟರ್ ಕೆ.ವಿ. ರೇಣುಕ ಪ್ರಸಾದ್ ಮಾತನಾಡಿ, ಸಮುದಾಯದ ಪ್ರತಿಯೊಬ್ಬರು ತಮ್ಮ ನೈಜ ಮಾಹಿತಿಯನ್ನು ಸಮೀಕ್ಷಾ ಸಂದರ್ಭದಲ್ಲಿ ಒದಗಿಸುವ ಮೂಲಕ, ಮುಂದಿನ ದಿನಗಳಲ್ಲಿ ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಮಾತನಾಡಿ, ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆಯುತ್ತಿರುವುದರಿಂದ, ಈಗಾಗಲೇ ಸರಕಾರ ಹಾಗೂ ಇಲಾಖೆಗಳ ಬಳಿಯಲ್ಲಿ ನಮ್ಮ ಹಲವಾರು ದಾಖಲಾತಿಗಳು ದಾಖಲಾಗಿರುವುದರಿಂದ, ಸಮೀಕ್ಷೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೆ ನೈಜ ಮಾಹಿತಿಯನ್ನು ಒದಗಿಸಿ, ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯಗಳನ್ನು
ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಕಾಡೆಮಿಯ ಸದಸ್ಯರಾದ ಡಾ. ನಿಡ್ಯಮಲೆ ಜ್ಞಾನೇಶ್ ಸ್ವಾಗತಿಸಿ ಚಂದ್ರಾವತಿ ಬಡ್ಡಡ್ಕ ಹಾಗೂ ಲತಾ ಸುಪ್ರೀತ್ ಕಾರ್ಯಕ್ರಮ ನಿರೂಪಿಸಿ ಲತಾ ಪ್ರಸಾದ್ ಕುದುಪಾಜೆ ವಂದಿಸಿದರು.