ಸುಂಟಿಕೊಪ್ಪ,ಸೆ.೧೯: ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ತಮ್ಮ ಸಮೀಪದ ಶಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳುವಂತೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಕರೆ ನೀಡಿದರು. ಅವರು ಇತ್ತೀಚೆಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ವತಿಯಿಂದ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಜನ ಸುರಕ್ಷಾ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಸರ್ಕಾರದ ಆದೇಶದಂತೆ ಆಯಾ ಗ್ರಾಮದ ಬ್ಯಾಂಕ್ ಶಾಖೆ ಮುಖಾಂತರ ಪ್ರತಿ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಸುಂಟಿಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಅನಿಕೇತ್ ಅವರು, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.ನಂತರ ಆರ್ಥಿಕ ಸಮಾಲೋಚಕರಾದ ನಬಿ ಅವರು ಮಾತನಾಡಿ, ಪ್ರತಿಯೊಬ್ಬರು ಮರು ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ಎಲ್ಲರೂ ನಿಮ್ಮ ಖಾತೆ ಇರುವ ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಗುರುತಿನ ಚೀಟಿ ಆಧಾರ್ ಕಾರ್ಡನ್ನು ನೀಡಿ ಮರು ಕೆವೈಸಿ ಮಾಡಿಸುವಂತೆ ಗ್ರಾಹಕರಿಗೆ ಸಲಹೆ ನೀಡಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ನಬಾರ್ಡ್ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು, ಭದ್ರತಾ ಯೋಜನೆಗಳನ್ನು ಮಾಡಿಸುವುದು ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪಾವತಿಗಳ ಬಗ್ಗೆ ಮಾಹಿತಿ ನೀಡುವುದೇ ಇದರ ಉದ್ದೇಶ ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ ಕುಮಾರಿ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಸೆಲ್ವ ಕುಮಾರ್, ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕರು ಹಾಜರಿದ್ದರು.