ಮಡಿಕೇರಿ, ಸೆ.೧೯: ಜಿಲ್ಲೆಯ ಜನತೆಯ ಬಹುದಿನಗಳ ನಿರೀಕ್ಷೆಯಂತೆ ಸುಮಾರು ೧೦.೫೦ ಕೋಟಿ ರೂ. ವೆಚ್ಚದ ‘ಹೃದ್ರೋಗ ತಪಾಸಣಾ ಕೇಂದ್ರ’ ಶೀಘ್ರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಹೆಚ್.ಕೆ.ಸೋಮಶೇಖರ್ ಅವರು ತಿಳಿಸಿದ್ದಾರೆ.

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಹಕಾರದೊಂದಿಗೆ ನಗರದ ಕಾವೇರಿ ಹಾಲ್‌ನಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರಿಗೆ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಡಿಕೇರಿ ಕ್ಷೇತ್ರದ ಶಾಸಕರ ಶ್ರಮದಿಂದ ಹೃದ್ರೋಗ ತಪಾಸಣಾ ಕೇಂದ್ರದ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರವು ‘ಪಿಪಿಪಿ’ ಯೋಜನೆಯಡಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ ಎಂದರು. ಹೃದ್ರೋಗ ತಪಾಸಣಾ ಕೇಂದ್ರ ಆರಂಭಗೊಳ್ಳುತ್ತಿದೆಯಾದರೆ, ನೆಫಾಲಜಿ ವಿಭಾಗದಲ್ಲಿ ತಜ್ಞ ವೈದ್ಯರಾದ ಡಾ.ಅತೀಶ್ ಅವರು ಕಾರ್ಯನಿರ್ವಹಿಸಲಿದ್ದಾರೆ. ನ್ಯೂರೋಲಜಿ ಸೇರಿದಂತೆ ಕೆಲ ವಿಭಾಗಗಳ ಚಿಕಿತ್ಸಾ ಸೌಲಭ್ಯಗಳ ಆರಂಭ ಇನ್ನಷ್ಟೆ ಆಗಬೇಕಿದೆ ಎಂದರು.

ನಗರದಲ್ಲಿರುವ ಬೋಧಕ ಆಸ್ಪತ್ರೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಶೀಘ್ರದಲ್ಲೆ ೧೦೫೦ ಹಾಸಿಗೆಗಳ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ. ಅತ್ಯುನ್ನತ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೂಪರ್ ಸ್ಪೆಷಾಲಿಟಿ ಮಟ್ಟದ ಸೌಲಭ್ಯ ದೊರಕಲಿದೆ ಎಂದು ಡಾ.ಹೆಚ್.ಕೆ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ ಮಾತನಾಡಿ, ನಮ್ಮ ದೇಶದಲ್ಲಿ ಆರೋಗ್ಯ ಸಂರಕ್ಷಣೆಯನ್ನು ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ. ವಿದೇಶಗಳಲ್ಲಿ ೪೦ ವರ್ಷ ಪ್ರಾಯದ ಬಳಿಕ ವಾರ್ಷಿಕ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ರೂಢಿಗತವಾಗಿದೆ. ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್ ಮಾತನಾಡಿ, ಕುಶಾಲನಗರದ ೫೦ ಹಾಸಿಗೆ ಆಸ್ಪತ್ರೆಯನ್ನು ೧೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಶೀಘ್ರ ಮೇಲ್ದರ್ಜೆಗೇರಿಸಲಾಗುತ್ತದೆ. ವೀರಾಜಪೇಟೆಯ ೯೦ ಹಾಸಿಗೆಯ ಆಸ್ಪತ್ರೆಯನ್ನು ೨೪೦ ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು. ಗೋಣಿಕೊಪ್ಪಲಿನಲ್ಲಿ ಇರುವ ಆರೋಗ್ಯ ಕೇಂದ್ರವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇಂದಿನ ಬದಲಾದ ಜೀವನ ಪದ್ಧತಿಗಳಿಂದ ಯುವ ಸಮೂಹ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ತಪಾಸಣೆಯ ಮೂಲಕ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡುವಂತೆ ತಿಳಿಸಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯವಾದ ಕೋಟ್ಯಂತರ ಮೌಲ್ಯದ ಉಪಕರಣಗಳು ಇವೆಯಾದರು, ಇದರ ಬಳಕೆಗೆ ಅಗತ್ಯವಾದ ಸಿಬ್ಬಂದಿಗಳು, ತಜ್ಞರ ಕೊರತೆ ಇದೆ. ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಗಾಳಿ ಮಳೆ ಇರುತ್ತದೆ, ಮಕ್ಕಳಿಗೆ ಯೋಗ್ಯ ಶಿಕ್ಷಣ ದೊರಕಲಾರದು ಎನ್ನುವ ತಪ್ಪು ಕಲ್ಪನೆಗಳಿಂದ ಇಲ್ಲಿಗೆ ವೈದ್ಯರು, ಸಿಬ್ಬಂದಿಗಳು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ತಪ್ಪು ಕಲ್ಪನೆಗಳನ್ನು ದೂರಮಾಡಿ, ಜಿಲ್ಲೆಯ ಆಸ್ಪತ್ರೆಗಳಿಗೆ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲು ಸರಕಾರ ಮುಂದಾಗಬೇಕೆAದು ಮನವಿ ಮಾಡಿದರು.

ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿಕುಮಾರ್, ಒತ್ತಡಗಳ ನಡುವೆ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯ ಸಂರಕ್ಷಣೆಯ ಹಿತ ದೃಷ್ಟಿಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಅವರು ಮಾತನಾಡಿ, ಸಂಘದಿAದ ಪತ್ರಕರ್ತರ ಹಿತದೃಷ್ಟಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗವನ್ನು ಪತ್ರಕರ್ತರು ಪಡೆದುಕೊಳ್ಳುವಂತೆ ಕೋರಿದರು. ರಾಜ್ಯ ಸರ್ಕಾರ ಕೊಡಮಾಡುವ ಪ್ಲಾರೆನ್ಸ್ ನೈಂಟಿಗೆಲ್ ಪ್ರಶಸ್ತಿಗೆ ಭಾಜನರಾಗಿರುವ ನಿವ್ಯತ್ತ ನರ್ಸಿಂಗ್ ಸೂಪರಿಂಟೆAಡೆAಟ್ ವಸಂತಿ ಬಿ.ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ಡಾ.ಹೆಚ್.ಕೆ.ಸೋಮಶೇಖರ್, ಡಾ. ನಂಜುAಡಯ್ಯ, ಡಾ.ಸತೀಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಆರ್.ಹರೀಶ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷರಾದ ವಿಘ್ನೇಶ್ ಭೂತನಕಾಡು, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು.

ಸಂಘದ ಸದಸ್ಯರಾದ ಟಿ.ಜೆ.ಪ್ರವೀಣ್ ಕುಮಾರ್ ಪ್ರಾರ್ಥಿಸಿ, ಸಂಘದ ನಿರ್ದೇಶಕರಾದ ಅರುಣ್ ಕೂರ್ಗ್ ಸ್ವಾಗತಿಸಿದರು. ಪಿ.ಎಂ. ರವಿ ಕಾರ್ಯಕ್ರಮ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು