ಮುಳ್ಳೂರು, ಸೆ. ೧೯: ಪೋಷಣ್ ಮಾಸಾಚರಣೆ ಪ್ರಯುಕ್ತ ಸಮೀಪದ ಬೆಸೂರು ಗ್ರಾ.ಪಂ.ಯ ಸಭಾಂಗಣದಲ್ಲಿ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು. ಬೆಸೂರು ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬೆಸೂರು ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸ್ಮಿತಾ ಮಾತನಾಡಿ, ಗರ್ಭಿಣಿಯರು ಹೆಚ್ಚಾಗಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಸ್ಥಳೀಯವಾಗಿ ಸಿಗುವ ಹಣ್ಣು-ಹಂಪಲು, ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳು ಮುಂತಾದವುಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುವುದರಿಂದ ಇವುಗಳನ್ನು ಸೇವಿಸುವುದರಿಂದ ಗರ್ಭಿಣಿಯರಲ್ಲಿ ಪೌಷ್ಟಿಕಾಂಶ ವೃದ್ಧಿಸುತ್ತದೆ ಎಂದರು.

ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವಿಸುವ ಜೊತೆಯಲ್ಲಿ ಗರ್ಭಿಣಿಯರು ಸಾಧ್ಯವಾದರೆ ಪೌಷ್ಟಿಕಾಂಶ ಒಳಗೊಂಡಿರುವ ಮೊಟ್ಟೆ, ಮೀನು, ಮಾಂಸವನ್ನು ಸೇವಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂದು ಹೇಳಿದರು.

ಆರೋಗ್ಯ ಅಧಿಕಾರಿ ಕೇಶವಮೂರ್ತಿ, ಗರ್ಭಿಣಿಯರು ಮತ್ತು ಬಾಣಂತಿಯರು ಸರಿಯಾದ ಸಮಯಕ್ಕೆ ಚುಚ್ಚುಮದ್ದು ಮತ್ತು ಲಸಿಕೆಯನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ದಯಾಕರ್, ಕಿಶನ್, ರವಿ ಗ್ರಾ.ಪಂ. ಸಿಬ್ಬಂದಿ ಆನಂದ್, ನಿಜಗುಣ ಮತ್ತು ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗರ್ಭಿಣಿ ಮತ್ತು ಬಾಣಂತಿಯರು ಪಾಲ್ಗೊಂಡಿದ್ದರು.