ವೀರಾಜಪೇಟೆ, ಸೆ. ೧೮: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಆರೋಗ್ಯ ರಕ್ಷಾ ಸಮಿತಿ ಅದ್ಯಕ್ಷ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದ ಶಾಸಕರು, ಆಸ್ಪತ್ರೆಯ ವರದಿಯನ್ನು ತರಿಸಿಕೊಂಡು ಪರಿಶೀಲಿಸಿದರು.

ಚಿಕಿತ್ಸೆಗೆಂದು ಬರುವ ಎಲ್ಲಾ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಒದಗಿಸುವಂತೆ ಹೇಳಿದ ಶಾಸಕರು ಆಸ್ಪತ್ರೆಗೆ ಬೇಕಾದ ಎಲ್ಲಾ ಅತ್ಯಗತ್ಯ ಸವಲತ್ತುಗಳು ಯಾವುದೇ ಕಾರಣಕ್ಕೂ ಇಲ್ಲ ಎಂದಾಗಬಾರದು ಎಂದು ಆದೇಶ ನೀಡಿದರು.

ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ತಮ್ಮ ಬಳಿಗೆ ಬರುವ ಎಲ್ಲಾ ರೋಗಿಗಳನ್ನು ಅತ್ಯಂತ ಕಾಳಜಿಯಿಂದ ಪರೀಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಬೇಕೆಂಬ ಆದೇಶ ನೀಡಿದರು.

ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ತೀ ರೋಗ ತಜ್ಞರು, ಕಳೆದ ಒಂದು ವರ್ಷಗಳಿಂದ ಮಕ್ಕಳ ತಜ್ಞರು, ಹಾಗೂ ಮೂಳೆ ತಜ್ಞರು ಇಲ್ಲದೆ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಬಯಸಿದರು.

ವೀರಾಜಪೇಟೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ ಸಿಂಪಿ ಮಾಹಿತಿ ನೀಡಿ ಈ ಆಸ್ಪತ್ರೆಗೆ ಅನೇಕ ವೈದ್ಯರು ಬಂದು ಕೆಲವು ದಿನಗಳ ಕಾಲ ಇದ್ದು ತಕ್ಷಣ ಬೇರೆ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಖಾಯಂ ಆಗಿ ಕಾರ್ಯ ನಿರ್ವಹಿಸಲು ವೈದ್ಯರನ್ನು ನೇಮಕ ಮಾಡಬೇಕು. ಅಲ್ಲದೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಸರಕಾರದ ಆದೇಶದಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶುಶ್ರೂಷಕಿಯರನ್ನು ಕೂಡ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ನಂತರ ಆಸ್ಪತ್ರೆಗೆ ವಿವಿಧ ಬೇಡಿಕೆಯನ್ನು ಪೂರೈಸಲು ಮನವಿ ಮಾಡಿದರು. ಶಾಸಕರು ವೈದ್ಯರ ನೇಮಕ ಮಾಡಲು ಸಂಬAಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ವೈದ್ಯರ ನೇಮಕ ಮಾಡುವ ಬಗ್ಗೆ ತಿಳಿಸಿದರು. ಕಳೆದ ಸಭೆಯಲ್ಲಿ ಆಸ್ತತ್ರೆಯ ಜಾಗದ ಬಗ್ಗೆ ಸರ್ವೆ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಆಸ್ಪತ್ರೆ ನಕಾಶೆಯನ್ನು ಶಾಸಕರ ಮುಂದೆ ಇಟ್ಟರು. ಆಸ್ಪತ್ರೆಗೆ ಸೇರಿದ ಜಾಗ ಅಂತ ಯಾವುದು ಇಲ್ಲ. ಎಲ್ಲಾ ಜಾಗ ಸರಕಾರದ ಒಟ್ಟು ಹದಿನೈದು ಎಕರೆ ಜಾಗವಿದೆ ಎಂದು ಮಾಹಿತಿ ನೀಡಿದರು. ಬಲ್ಲ ಮಾಹಿತಿಯ ಪ್ರಕಾರ ಆಸ್ಪತ್ರೆ ಜಾಗ ಒಟ್ಟು ಒಂಬತ್ತು ಎಕರೆ ಇರುತ್ತದೆ ಆದರೆ ಜಾಗದ ವಿಸ್ತೀರ್ಣದ ಬಗ್ಗೆ ಸರ್ವೆ ಮಾಡುವಂತೆ ಶಾಸಕರು ನಿರ್ದೇಶನ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಯತಿರಾಜ್, ಆಸ್ಪತ್ರೆಯ ಎಲ್ಲಾ ವೈದ್ಯರು, ಪುರಸಭೆ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಮುಖ್ಯಾಧಿಕಾರಿ ನಾಚಪ್ಪ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಂಜಿ ಪೂಣಚ್ಚ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ರಕ್ಷಾ ಸಮಿತಿಯ ಸದಸ್ಯರಾದ ಕುಂಡಚೀರ ಮಂಜು ದೇವಯ್ಯ, ಮಂಡೇಟಿರ ಅನಿಲ್ ಅಯ್ಯಪ್ಪ, ಸಂತೋಷ್ ಕುಮಾರ್, ಶೀಬಾ ಪೃಥ್ವಿ ನಾಥ್, ಸೈಯದ್ ಶಬೀರ್, ಅನಿತಾ, ಕಿಶೋರ್, ಅನಿತಾ ಪ್ರಸನ್ನ, ಜಿಲ್ಲಾ ಆರೋಗ್ಯ ಅಧಿಕಾರಿ, ತಾಲೂಕು ಅಧಿಕಾರಿ, ಪುರಸಭೆ ಸದಸ್ಯ ಮತೀನ್, ವೈದ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.