ಮಡಿಕೇರಿ, ಸೆ. ೧೮: ಸರ್ಕಾರಿ ಉದ್ಯೋಗದಲ್ಲಿರುವ ಸಿಬ್ಬಂದಿಗಳಿಗೆ ರಜೆ ಸಿಕ್ಕಿದರೆ ಸಾಕು ನೆಮ್ಮದಿಯ ದಿನ ಕಳೆಯುತ್ತಾರೆ. ಆದರೆ ಚೆನ್ನಂಗಿ ಶಾಲೆಯ ಶಿಕ್ಷಕರುಗಳು ರಜಾ ದಿನದಲ್ಲೇ ಪೋಷಕರು ಹಾಗೂ ಮಕ್ಕಳಿಗೆ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಮಾದರಿಯಾಗಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಶಿಕ್ಷಕರುಗಳ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೆನ್ನಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರು ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಅರಿವು ಜಾಗೃತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಾಡಂಚಿನ ಗ್ರಾಮೀಣ ಭಾಗದ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಾರೆ. ಹೊಟ್ಟೆಪಾಡಿನ ಜೀವನಕ್ಕಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುವ ಪೋಷಕರು ದಿನನಿತ್ಯ ದುಡಿದು ಭಾನುವಾರದಂದು ರಜೆ ದಿನವಾಗಿ ಮಕ್ಕಳೊಂದಿಗೆ ಮನೆಯಲ್ಲಿ ಇರುತ್ತಾರೆ.

ದಿನನಿತ್ಯದ ಕೆಲಸದ ಒತ್ತಡದ ನಡುವೆ ಮಕ್ಕಳ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಪೋಷಕರನ್ನು ಶಾಲೆಗೆ ಕರೆತರಲು ಶಿಕ್ಷಕರುಗಳು ತಮ್ಮ ರಜಾ ದಿನವನ್ನು ಬಿಟ್ಟು ವಿಶೇಷ ಕಾರ್ಯಕ್ರಮ ಆಯೋಜಿಸಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ ಶಾಲೆಯ ಶಿಕ್ಷಕರು ಮಾದರಿಯಾಗಿದ್ದಾರೆ ಎಂದು ಅಭಿನಂದಿಸಿದರು.

ಸAಜೀವಿನಿ ಒಕ್ಕೂಟದ ಗಾಯತ್ರಿ ಮಾತನಾಡಿ, ಯುವ ಸಮೂಹ ಮಾದಕ ವಸ್ತುಗಳಿಂದ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆAದರು.

ಸAಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ. ಸುಜಾತ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದು, ಪೋಷಕರ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಇದನ್ನು ತಡೆಗಟ್ಟಲು ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ಹೇಳಿದ ಅವರು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಮಕ್ಕಳ ಬೆಳವಣಿಗೆಗೆ ಪೋಷಕರು ಮುಂದಾಗ ಬೇಕಾಗಿದೆ ಎಂದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕೆ.ಕೆ. ಸುಷಾ ಮಾತನಾಡಿ, ಅಧಿಕಾರಿಗಳ ಅನುಮತಿಯೊಂದಿಗೆ ಪೋಷಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ರಜಾ ದಿನದಂದೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಮಕ್ಕಳು ಹಾಗೂ ಪೋಷಕರಿಗೆ ಜಾಗೃತಿ ಅರಿವು ಕಲಿಕಾ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದ್ದು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಶಾಲೆಯಲ್ಲಿ ಶಿಕ್ಷಕರುಗಳ ಕಾಳಜಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಪೋಷಕರಾಗಿ ಹಾಡಿ ನಿವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಶಾಲೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಬೆಳವಣಿಗೆ, ಆರೋಗ್ಯ ಕಾಳಜಿ, ಪರಿಸರ, ಶುಚಿತ್ವ, ಕ್ರೀಡಾ ಕಲಿಕೆ, ಸಂಗೀತ, ನೃತ್ಯ, ಕಲೆ, ಯೋಗ, ಜ್ಞಾನ, ವನ್ಯಪ್ರಾಣಿಗಳಿಂದ ರಕ್ಷಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಎಂ.ಎನ್. ವಿಜು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷೆ ಈಶ್ವರಿ, ಸಹ ಶಿಕ್ಷಕಿಯರಾದ ಮಂಜುಳಾ, ಪ್ರತಿಮಾ, ಕಲಾವಿದ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

-ಎಸ್.ಎಂ. ಮುಬಾರಕ್