(ವಿಶೇಷ ವರದಿ, ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಸೆ. ೧೮ : ದ. ಕೊಡಗಿನ ಪೊನ್ನಂಪೇಟೆ ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ತಾಲೂಕು ಕಚೇರಿ ಕಟ್ಟಡ ಇತಿಹಾಸ ಪುಟ ಸೇರಿದೆ. ಇದೇ ಜಾಗದಲ್ಲಿ ೨ ಅಂತಸ್ತಿನ ಪ್ರಜಾಸೌಧ ಕಟ್ಟಡವು ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದ್ದು ಈಗಾಗಲೇ ಸರ್ಕಾರದ ವತಿಯಿಂದ ನೂತನ ಪ್ರಜಾಸೌಧ ನಿರ್ಮಾಣಕ್ಕೆ ೮.೬೦ ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಪ್ರಮುಖ ಪಾತ್ರ ವಹಿಸಿದ್ದು, ಪ್ರಸ್ತುತ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಯ ಕೆಲಸಕ್ಕೆ ಈ ಹಿಂದೆ ಇದ್ದಂತಹ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.
ಪ್ರಸ್ತುತ ಇರುವ ಜಾಗವು ೧.೫೦ ಏಕ್ರೆ ವಿಸ್ತೀರ್ಣವಿದ್ದು ೧೯೫೬-ರಿಂದ ೧೯೬೦ ಇಸವಿಯಲ್ಲಿ ೪ ವರ್ಷಗಳ ಕಾಲ ಈ ಬೃಹತ್ ಕಟ್ಟಡವನ್ನು ಗುಣಮಟ್ಟದ ಸೈಜ್ ಕಲ್ಲುಗಳಿಂದಲೇ ಅಂದಿನ ಗುತ್ತಿಗೆದಾರರು ನಿರ್ಮಾಣ ಮಾಡಿದ್ದರು. ಕಟ್ಟಡವು ಸಂಪೂರ್ಣವಾಗಿ ಸೈಜ್ ಕಲ್ಲಿನಿಂದಲೇ ನಿರ್ಮಾಣವಾಗಿರುವುದು ಈ ಕಟ್ಟಡದ ವಿಶೇಷವಾಗಿದೆ.
ತಜ್ಞರ ಮಾಹಿತಿಯಂತೆ ಈ ಕಟ್ಟಡಕ್ಕೆ ಅಂದಿನ ಕಾಲದಲ್ಲಿ ೧.೨೦ ಲಕ್ಷ ಸೈಜ್ ಕಲ್ಲುಗಳನ್ನು ಬಳಸಲಾಗಿತ್ತು. ಹಾಗೂ ಅಡಿಪಾಯಕ್ಕಾಗಿ ೨೦ ಸಾವಿರ ಕಲ್ಲುಗಳನ್ನು ಬಳಕೆ ಮಾಡಲಾಗಿತ್ತು. ೪೦೦ ಅಡಿ ಉದ್ದದ ೧೦೦ ಅಡಿ ಅಗಲದ ೨೫ ಅಡಿ ಎತ್ತರದ ಕಲ್ಲಿನ ಕಟ್ಟಡ ಅಂದು ನಿರ್ಮಾಣ ಮಾಡಲಾಗಿತ್ತು.
ಈ ಕಟ್ಟಡದಲ್ಲಿ ಆಗಿನ ಸಂದರ್ಭಕ್ಕೆ ಅನುಗುಣವಾಗಿ ಅಕ್ಕಿ,ಗೋದಿ ಶೇಖರಣಾ ಗೋದಾಮು ಮಾಡಲಾಗಿತ್ತು. ಇಲ್ಲಿಂದಲೇ ಅಗತ್ಯ ಸಾಮಾಗ್ರಿಗಳು ಇತರೆಡೆಗೆ ತೆರಳುತ್ತಿದ್ದವು. ಆಹಾರ ಮತ್ತು ನಾಗರಿಕ ಇಲಾಖೆಯು ಇದರ ನಿರ್ವಹಣೆ ಮಾಡಿತ್ತು. ೧೯೭೩ರಲ್ಲಿ ಅಕ್ಕಿ,ಗೋದಿ ಶೇಖರಣಾ ಗೋದಾಮನ್ನು ಸರ್ಕಾರದ ನಿಯಮದಂತೆ ಖಾಲಿ ಮಾಡುವ ಮೂಲಕ ಐಟಿಐ ಕಾಲೇಜಿಗೆ ಕಟ್ಟಡದ ೨ ಕೊಠಡಿಗಳನ್ನು ನೀಡಲಾಗಿತ್ತು. ಹಲವು ವರ್ಷಗಳ ನಂತರ ಸ್ವಂತ ಕಟ್ಟಡಕ್ಕೆ ಐಟಿಐ ಸ್ಥಳಾಂತರಗೊAಡಿತ್ತು.
ಇದೇ ಕಟ್ಟಡದಲ್ಲಿ ಬಿಹೆಚ್‌ಇಎಲ್‌ನ ಅಂಗ ಸಂಸ್ಥೆಯಾದ ಮೀಟರ್ ವಿದ್ಯುತ್ ಘಟಕ ಸ್ಥಾಪನೆ ಮಾಡಲಾಗಿತ್ತು. ಅಂದಿನ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ದಿ.ಜಮ್ಮಡ ಎ.ಕರುಂಬಯ್ಯನವರು ಹಾಗೂ ಅಂದಿನ ಬಿಡಿಒ ಪದನಿಮಿತ್ತ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ತರುವಾಯ ಜಿ.ಪಂ.ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿಯ ಇಒ ಕಾರ್ಯ ನಿರ್ವಾಹಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಈ ಕಟ್ಟಡದಲ್ಲಿ ೧೬.೧.೨೦೧೦ರಂದು ಉತ್ತರ ಭಾಗದಲ್ಲಿ ನ್ಯಾಯಲಯವು ಆರಂಭವಾಯಿತು. ನ್ಯಾಯಾಲಯದ ಮಂಜೂರಾತಿಗಾಗಿ ಬಾರ್ ಆಸೋಸಿಯೇಷನ್‌ನ ಅಂದಿನ ಪ್ರಥಮ ಸ್ಥಾಪಕ ಅಧ್ಯಕ್ಷರಾಗಿ ದಿ. ಎ.ಟಿ. ಭೀಮಯ್ಯನವರ ತಂಡ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಎ.ಎಸ್. ಬೋಪಣ್ಣನವರ ಉಪಸ್ಥಿತಿಯಲ್ಲಿ ಸುಪ್ರಿಮ್ ಕೋರ್ಟ್ನ ನ್ಯಾಯಧೀಶರಾದ ವಿ.ಗೋಪಾಲ್ ಗೌಡರು ಜೆಎಂಎಪ್‌ಸಿ ನ್ಯಾಯಾಲಯವನ್ನು ಉದ್ಘಾಟನೆಗೊಳಿಸಿದ್ದರು. ಪ್ರಸ್ತುತ ನೂತನ ಕಟ್ಟಡವು ಪೊನ್ನಂಪೇಟೆಯಲ್ಲಿ ನಿರ್ಮಾಣಗೊಂಡಿದೆ.
ನೂತನ ತಾಲೂಕು ಕೇಂದ್ರದ ಹೋರಾಟಕ್ಕೆ ೨೦೧೦ರಲ್ಲಿ ಚಾಲನೆ ನೀಡಲಾಯಿತು. ನಾಗರಿಕ ವೇದಿಕೆಯ ಮೂಲಕ ಹೋರಾಟ ಕೈಗೊಳ್ಳಲಾಯಿತು. ಅಂದಿನ ಸ್ಥಾಪಕ ಅಧ್ಯಕ್ಷರಾಗಿ ದಿ. ಎಸ್.ಬಿ. ತಿಮ್ಮಯ್ಯ ಜವಾಬ್ದಾರಿ ವಹಿಸಿದ್ದರು. ತದ ನಂತರ ಪಿ.ಬಿ. ಪೂಣಚ್ಚ, ಸಿ.ಎಸ್. ವಾಸು ಉತ್ತಪ್ಪ, ಹಾಲಿ ಅಧ್ಯಕ್ಷ ಸಿ.ಎನ್ .ವಿಶ್ವನಾಥ್ ಉಪಾಧ್ಯಕ್ಷರುಗಳಾದ ಸಿ.ಕೆ. ಸೋಮಯ್ಯ, ಎ.ಎ. ಎರ್ಮು ಹಾಜಿ, ಇವರ ತಂಡ ನಿರಂತರವಾಗಿ ಹತ್ತು ವರ್ಷಗಳ ಕಾಲ ಹೋರಾಟದೊಂದಿಗೆ ಸರ್ಕಾರಕ್ಕೆ ವಿವಿಧ ರೀತಿಯಲ್ಲಿ ಒತ್ತಡ ತರುವ ಮೂಲಕ ಹೊಸ ತಾಲೂಕು ರಚನೆಗೆ ಶ್ರಮಿಸಿದ್ದರು.
ಅಂದಿನ ಕೊಡಗು ಜಿಲ್ಲಾಧಿಕಾರಿಗಳಾಗಿದ್ದ ಶ್ರೀವಿದ್ಯಾ, ಅನೀಶ್ ಕಣ್ಮಣಿ ಜಾಯ್, ಡಾ. ಸತೀಶ್, ನಿವೇಶನವನ್ನು ಗುರುತು ಮಾಡುವಲ್ಲಿ ಪಾತ್ರ ವಹಿಸಿದ್ದರು. ೧.೧೨.೨೦೨೦ರಲ್ಲಿ ಅಂದಿನ ಶಾಸಕರಾದ ಕೆ.ಜಿ. ಬೋಪಯ್ಯನವರ ಅಧ್ಯಕ್ಷತೆಯಲ್ಲಿ ಅಂದಿನ ಕಂದಾಯ ಸಚಿವರಾದ ಆರ್. ಅಶೋಕ್‌ರವರು ನೂತನ ತಾಲೂಕು ಕಚೇರಿಯನ್ನು ಲೋಕಾರ್ಪಣೆ ಮಾಡಿದ್ದರು. ೧೯೮೧ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್‌ರವರು ಈ ಕಟ್ಟಡದಲ್ಲಿದ್ದ ಬಿಹೆಚ್‌ಇಎಲ್ ಸಹಭಾಗಿತ್ವದ ಮೀಟರ್ ಘಟಕ ಆರಂಭಕ್ಕೆ ಕಟ್ಟದ ಅರ್ಧ ಭಾಗವನ್ನು ನೀಡಿದ್ದರು. ೨೫೦ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ಅವಕಾಶ ದೊರಕಿತ್ತು. ಕೊಡಗು ಮೀರ‍್ಸ್ ಹೆಸರಿನಲ್ಲಿ ಈ ಘಟಕ ನಡೆಯುತ್ತಿತ್ತು. ೨ ದಶಕಗಳ ನಂತರ ನೂತನ ತಂತ್ರಜ್ಞಾನ ಪ್ರವೇಶ ಮಾಡುತ್ತಿದ್ದಂತೆಯೇ ಈ ಮೀಟರ್ ಘಟಕವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಇದರಲ್ಲಿದ್ದ ಉದ್ಯೋಗಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ಇಲ್ಲಿಯ ತನಕ ವ್ಯಾಜ್ಯ ಮುಂದುವರೆಯುತ್ತಲೆ ಇದೆ
೧೯೮೪ರಲ್ಲಿ ಕೈಗಾರಿಕಾ ತರಬೇತಿಯನ್ನು ಈ ಕಟ್ಟಡದಲ್ಲಿ ಸ್ಥಾಪಿಸಲಾಗಿತ್ತು. ಜಿಲ್ಲೆಯ ಯುವಕ ಯುವತಿಯರು ಐಟಿಐನಲ್ಲಿ ತರಬೇತಿ ಹೊಂದಿ ಉದ್ಯೋಗ ಸೃಷ್ಟಿಸಿಕೊಂಡಿದ್ದರು. ಐಟಿಐ ಸ್ವಂತ ಕಟ್ಟಡ ಹೊಂದಿದ ಹಿನ್ನಲೆಯಲ್ಲಿ ಈ ಕಟ್ಟಡದಿಂದ ಸ್ಥಳಾಂತರಗೊAಡಿತ್ತು. ೨೦೨೧ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪೊನ್ನಂಪೇಟೆ ತಾಲೂಕನ್ನು ಘೋಷಣೆ ಮಾಡಿದ್ದರು. ಪೊನ್ನಂಪೇಟೆ ನಾಗರಿಕ ವೇದಿಕೆ ಸುಮಾರು ೨೫ ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ಪೊನ್ನಂಪೇಟೆ ತಾಲೂಕು ಕಚೇರಿಗೆ ಬೇಕಾದ ಸವಲತ್ತುಗಳನ್ನು ನೀಡುವ ಮೂಲಕ ತಾತ್ಕಾಲಿಕವಾಗಿ ಈ ಕಟ್ಟಡದಲ್ಲಿ ತಾಲೂಕು ಕಚೇರಿ ಕಾರ್ಯ ನಿರ್ವಹಿಸಿತ್ತು.
ಆಹಾರ ಇಲಾಖೆಯ ಒಡೆತನದಲ್ಲಿದ್ದ ಈ ಜಾಗವನ್ನು ಆಡಳಿತ ಸೌಧವನ್ನು ನಿರ್ಮಿಸಲು ಆಹಾರ ನಿಗಮದ ಖಾತೆಯಲ್ಲಿದ್ದ ೧.೫೦ ಏಕರೆ ಸ್ಥಳವನ್ನು ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಇಲಾಖೆಯ ಆಡಳಿತ ಸೌಧ ಪೊನ್ನಂಪೇಟೆ ಹೆಸರಿಗೆ ಜಾಗವನ್ನು ವರ್ಗಾವಣೆ ಮಾಡಲಾಗಿತ್ತು. ಇದರ ಮುಂಭಾಗದಲ್ಲಿರುವ ೪೦ ಸೆಂಟ್ ಜಾಗವನ್ನು ಪಟ್ಟಣ ಪಂಚಾಯಿತಿಯ ಹೆಸರಿಗೆ ವರ್ಗಾಯಿಸಿದ್ದು ಉತ್ತಮ ಉದ್ಯಾನವನ ನಿರ್ಮಿಸಲು ಈ ಜಾಗವನ್ನು ಮೀಸಲಿಡಲಾಗಿದೆ.
ಈ ಕಲ್ಲಿನ ಕಟ್ಟಡದಲ್ಲಿ ಮೀಟರ್ ಘಟಕ, ಆಹಾರ ದಾಸ್ತಾನು, ಐಟಿಐ, ನ್ಯಾಯಾಲಯ ಹಾಗೂ ತಾಲೂಕು ಕಚೇರಿ ಕಾರ್ಯ ನಿರ್ವಹಿಸಿತ್ತು. ಇದರಿಂದಾಗಿ ಹಳೆಯದಾದ ಕಲ್ಲಿನ ಈ ಕಟ್ಟಡವು ಸಾರ್ವಜನಿಕರ ಗಮನ ಸೆಳೆದಿತ್ತು. ಇದೀಗ ಈ ಕಟ್ಟಡವು ನೆಲಸಮಗೊಳ್ಳುವ ಮೂಲಕ ಕಟ್ಟಡವು ಇತಿಹಾಸ ಪುಟ ಸೇರಿದೆ.