ಪೊನ್ನಂಪೇಟೆ, ಸೆ. ೧೮: ದಸರಾ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಮೈಸೂರು ವಿಭಾಗಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುವ ಮೂಲಕ ರಾಜ್ಯಮಟ್ಟದ ಚೀಫ್ ಮಿನಿಸ್ಟರ್ ಕಪ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪ್ರಥಮ ಬಿ.ಬಿ.ಎ ವಿದ್ಯಾರ್ಥಿಗಳಾದ ಹರ್ಷ ಪಿ.ಯು. ಚಿನ್ನದ ಪದಕ ಹಾಗೂ ೧೫ ಸಾವಿರ ನಗದು, ಅರ್ಚನ ಯು.ಎನ್. ಬೆಳ್ಳಿ ಪದಕ ಹಾಗೂ ೧೦ ಸಾವಿರ ನಗದು, ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಸಂಜನಾ ಹೆಚ್. ಆರ್. ಬೆಳ್ಳಿ ಪದಕ ಹಾಗೂ ೧೦ ಸಾವಿರ ನಗದು ಬಹುಮಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಕೊಡಗು ಬಾಕ್ಸಿಂಗ್ ಅಸೋಸಿಯೇಷನ್‌ನಲ್ಲಿ ಚೆಪ್ಪುಡಿರ ಕರ್ನಲ್ ಮುತ್ತಣ್ಣ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಇವರಿಗೆ ದೇಯಂಡ ಮೇದಪ್ಪ ಹಾಗೂ ಶರತ್ ನಾಯ್ಡು ತರಬೇತಿ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ತಿಳಿಸಿದ್ದಾರೆ.