ಸೋಮವಾರಪೇಟೆ, ಸೆ. ೧೭: ಕೊಡಗು-ಹಾಸನ ಜಿಲ್ಲೆಗಳನ್ನು ಸಂಪರ್ಕಿಸುವ ಕುಂದಳ್ಳಿ, ಮಾಗೇರಿ-ಪಟ್ಲ ರಸ್ತೆಯನ್ನು ಅಂದಾಜು ರೂ. ೧ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಕುಂದಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕರು, ರಸ್ತೆಗಳ ಅಭಿವೃದ್ಧಿಯಿಂದಾಗಿ ಗ್ರಾಮಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಸಂಪರ್ಕ ರಸ್ತೆಗಳ ಉನ್ನತೀಕರಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.

ಶಾAತಳ್ಳಿಯಿAದ ಕುಂದಳ್ಳಿ ಮಾರ್ಗವಾಗಿ ಮಾಗೇರಿ-ಪಟ್ಲಕ್ಕೆ ಉತ್ತಮ ರಸ್ತೆ ನಿರ್ಮಾಣವಾದರೆ ಈ ಭಾಗದಲ್ಲಿ ಕೊಡಗು-ಹಾಸನ ಜಿಲ್ಲೆಗಳ ಗಡಿಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪಟ್ಲದಿಂದ ಕೂಡುರಸ್ತೆಯ ಮೂಲಕ ಸಕಲೇಶಪುರ ಹಾಗೂ ಬಿಸಿಲೆ ಘಾಟ್ ಮೂಲಕ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರಿಗೂ ತೆರಳಬಹುದಾಗಿದೆ. ಪ್ರಸ್ತುತ ಕುಂದಳ್ಳಿಯಿAದ ಮಾಗೇರಿ ರಸ್ತೆ ಕಿರಿದಾಗಿದ್ದು, ಇದರ ಅಭಿವೃದ್ಧಿಗೆ ರೂ. ೧ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯ ಪ್ಲಾನಿಂಗ್ ಅಂಡ್ ರೋಡ್ ಅಸೆಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಪ್ರಾಮ್ಸಿ) ಯೋಜನೆಯ ಮೂಲಕ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಐದೂವರೆ ಮೀಟರ್ ಅಗಲ, ೪೪೫ ಮೀಟರ್ ಉದ್ದದ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ಕೆಲಸ ನಡೆಯುವ ಸಂದರ್ಭ ಸ್ಥಳೀಯರು ಅಗತ್ಯ ಜಾಗ ನೀಡಿ ಸಹಕರಿಸಬೇಕು. ಅಂತೆಯೇ ಗುಣಮಟ್ಟದ ಕಾಮಗಾರಿಯ ಬಗ್ಗೆ ಜಾಗ್ರತೆ ವಹಿಸಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು, ರಸ್ತೆಯು ಕಿರಿದಾಗಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಭಾರೀ ಪ್ರಮಾಣದಲ್ಲಿ ಪ್ರವಾಸಿಗರ ವಾಹನಗಳು ಸಂಚರಿಸುತ್ತಿವೆ. ಈ ಹಿನ್ನೆಲೆ ಕೇವಲ ೪೪೫ ಮೀಟರ್ ರಸ್ತೆ ಸಾಲದು, ಕನಿಷ್ಟ ಪಟ್ಲದವರೆಗೆ ರಸ್ತೆಯ ಅಗಲೀಕರಣ ಮಾಡಬೇಕು. ಡಾಂಬರು ರಸ್ತೆಯಾದರೂ ಸಹಕಾರಿಯಾಗುತ್ತದೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ಈಗಾಗಲೇ ಉದ್ದೇಶಿತ ಕಾಮಗಾರಿಗೆ ಕ್ರಿಯಾಯೋಜನೆ ತಯಾರಾಗಿ ಅನುಮೋದನೆಗೊಂಡಿದೆ. ಮುಂದಿನ ದಿನಗಳಲ್ಲಿ ರಸ್ತೆಯ ಮುಂದುವರೆದ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಶಾಂತಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ.ಈ. ಜಯೇಂದ್ರ, ಕುಂದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್, ಪ್ರಮುಖರಾದ ಪ್ರಸಾದ್, ಲಿಂಗರಾಜು, ಪ್ರದೀಪ್, ಶಶಿಕಾಂತ, ಎಸ್.ಪಿ. ವೆಂಕಟೇಶ್, ಗುರುಮೂರ್ತಿ, ಪಟ್ಲ ಕಲ್ಲಳ್ಳಿ ಎಸ್ಟೇಟ್‌ನ ಪಿ.ಡಿ. ಕುಮಾರ್, ಬಿ.ಬಿ. ಸತೀಶ್, ಚೌಡ್ಲು ಚೇತನ್, ಲಾರೆನ್ಸ್, ಕಿರಣ್ ಉದಯಶಂಕರ್, ಹೆಚ್.ಆರ್. ಸುರೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಮಧುಕುಮಾರ್, ಕುಂದಳ್ಳಿ, ಕಲ್ಲಳ್ಳಿ ಹಾಗೂ ಮಾಗೇರಿ ಗ್ರಾಮಸ್ಥರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್ ಅವರುಗಳು ಉಪಸ್ಥಿತರಿದ್ದರು.