ವೀರಾಜಪೇಟೆ, ಸೆ. ೧೭: ಕರ್ನಾಟಕ ರಾಜ್ಯದಲ್ಲಿ ಗೌರಿ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನಮ್ಮ ವೀರಾಜಪೇಟೆ ಮೊದಲ ಸ್ಥಾನದಲ್ಲಿದೆ ಎಂದು ವಕೀಲ, ವೀರಾಜಪೇಟೆ ಅಂಗಾಳ ಪರಮೇಶ್ವರಿ ಹಾಗೂ ದಕ್ಷಿಣ ಮಾರಿಯಮ್ಮ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ವೀರಾಜಪೇಟೆಯ ಸಕ್ಸಸ್ ಮೆನ್ಸ್ ಹಬ್‌ನ ವತಿಯಿಂದ ವೀರಾಜಪೇಟೆಯ ಗೌರಿ ಗಣೇಶೋತ್ಸವ ಸಮಿತಿಗಳಿಗೆ ಹಾಗೂ ಅತ್ಯುತ್ತಮ ಮಂಟಪ, ಅತ್ಯುತ್ತಮ ಧ್ವನಿವರ್ಧಕ ಅಳವಡಿಕೆ ಮಾಡಿದ್ದ ಸಮಿತಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಟಿ.ಪಿ. ಕೃಷ್ಣ ಅವರು, ವೀರಾಜಪೇಟೆ ಪಟ್ಟಣದೊಳಗೆ ಇರುವ ೨೨ ಉತ್ಸವ ಸಮಿತಿಗಳು ಜತೆಗೂಡಿ ಎರಡೂವರೆ ಕಿ.ಮಿ. ದೂರದವರೆಗೆ ರಾತ್ರಿ ಪೂರ್ತಿ ಶೋಭಾಯಾತ್ರೆ ನಡೆಸಿ ಐತಿಹಾಸಿಕ ಗೌರಿಕೆರೆಯಲ್ಲಿ ವಿಸರ್ಜನೆ ಮಾಡುತ್ತಾ ಬರುತ್ತಿದ್ದೇವೆ. ಈ ರೀತಿ ಆಚರಣೆ ಕರ್ನಾಟಕದಲ್ಲಿ ಎಲ್ಲೂ ಇಲ್ಲ. ನಾವು ಪ್ರತಿವರ್ಷ ಸಂಪ್ರದಾಯಬಧ್ದವಾಗಿ, ವಿಜೃಂಭಣೆಯಿAದ ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಮೊದಲ ಸ್ಥಾನದಲ್ಲಿದ್ದೇವೆ ಎಂದರು.

ವೀರಾಜಪೇಟೆ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಸ್ವಾಭಿಮಾನವನ್ನು ಬದಿಗಿಟ್ಟು ಚಂದಾ ವಸೂಲಿ ಮಾಡಿ ವಿರಾಜಪೇಟೆಯಲ್ಲಿ ಗೌರಿ ಗಣೇಶೋತ್ಸವ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದೆ. ಈ ಅದ್ದೂರಿ ವಿಸರ್ಜನೋತ್ಸವ ಕಾರ್ಯಕ್ರಮದ ಹಿಂದೆ ಬಹಳಷ್ಟು ಶ್ರಮವಿದ್ದು ಇಲ್ಲಿ ಎಲ್ಲರೂ ವಿಭಿನ್ನವಾಗಿ ಶೋಭಾಯಾತ್ರೆಗೆ ಸಹಕರಿಸಿದ್ದು, ಎಲ್ಲರೂ ಸನ್ಮಾನಕ್ಕೆ ಅರ್ಹರು ಎಂದರು.

ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿ ಸರಕಾರದಿಂದ ಗೌರಿ ಗಣೇಶ ವಿಸರ್ಜನೋತ್ಸವಕ್ಕೆ ಯಾವುದೇ ಅನುದಾನವಿಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಅನುದಾನ ತರುವ ಪ್ರಯತ್ನವಾಗಬೇಕೆಂದರು.

ಪುರಸಭೆ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವ ನೀಡಿರುವುದು ಶ್ಲಾಘನೀಯ. ಹಾಗೆಯೇ ವೀರಾಜಪೇಟೆ ಸ್ಥಾಪನೆಯಾದಂದಿನಿAದ ಇದುವರೆಗೂ ಡಿಜೆ, ವಾದ್ಯ ಸೇರಿದಂತೆ ಇತರ ಯಾವ ಕಾರ್ಯಕ್ರಮಗಳಿಗೂ ಬಹುಮಾನ ನೀಡಲಾಗಿಲ್ಲ. ಇದು ಮೊದಲ ಪ್ರಯತ್ನ, ಇದು ಯಶಸ್ವಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಸ್. ಹೆಚ್ ಮತೀನ್ ಹಾಗೂ ಕರಾಟೆ ಪಟು ಚಂದ್ರನ್ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜೋ಼ಸ್ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಆಯೋಜಕರಾದ ಸಕ್ಸಸ್ ಮೆನ್ಸ್ ಹಬ್‌ನ ಮಾಲೀಕ ಆರ್. ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಕ್ಸಸ್ ಮೆನ್ಸ್ ಹಬ್ ವತಿಯಿಂದ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಗೌರಿ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಅತ್ಯುತ್ತಮವಾಗಿ, ಆಕರ್ಷಣೀಯವಾಗಿ ಜನರನ್ನು ರಂಜಿಸಿದ ಮಂಟಪಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವೋಟಿಂಗ್ ಆಯ್ಕೆ ಪ್ರಕ್ರಿಯೆಯ ಮೂಲಕ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮಿತಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ. ಕಳೆದ ವರ್ಷದಿಂದ ಈ ಬಹುಮಾನ ನೀಡುವ ವಿನೂತನ ಕಾರ್ಯ ಮಾಡುತ್ತಾ ಬಂದಿದ್ದೇವೆ. ಇದು ಸಮಿತಿಗಳಿಗೆ ಒಂದು ಪ್ರೋತ್ಸಾಹ ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕ್ರೀಯಾತ್ಮಕತೆ ಮೂಡಿಬರುವಂತಾಗಲಿ ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳಿದರು.

ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಪ್ರಥಮ ಮತ್ತು ಶ್ರೀ ವಿನಾಯಕ ಯುವ ಸಮಿತಿ ಶಿವಕೇರಿ ದ್ವಿತೀಯ, ಶ್ರೀ ಮಹಾ ಗಣಪತಿ ಸೇವಾ ಸಂಘ, ಗಣಪತಿ ಬೀದಿ ತೃತೀಯ ಸ್ಥಾನ ಪಡೆದುಕೊಂಡಿತು.

ಇದೇ ವೇಳೆ ಪುರಸಭೆ ಪೌರಕಾರ್ಮಿಕರಾದ ಮಂಜುಳಾ ಹಾಗೂ ಶಾಂತಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ೨೨ ಉತ್ಸವ ಸಮಿತಿಗಳಿಗೆ ನೆನಪಿನ ಕಾಣಿಕೆ ಹಾಗೂ ಅತ್ಯುತ್ತಮವಾಗಿ ಸಮಾಜಕ್ಕೆ ಸಂದೇಶ ನೀಡಿದ ಮತ್ತು ಸಂಸ್ಖೃತಿಯನ್ನು ಪರಿಚಯಿಸಿದ ಸ್ಥಭ್ದಚಿತ್ರಕ್ಕೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ೨೨ ಉತ್ಸವ ಸಮಿತಿಗಳ ಸದಸ್ಯರು, ಸಾರ್ವಜನಿಕರು, ಮೆನ್ಸ್ ಹಬ್‌ನ ಸದಸ್ಯರು ಹಾಜರಿದ್ದರು.