ಮಡಿಕೇರಿ, ಸೆ. ೧೭: ಸ್ವಾತಂತ್ರ‍್ಯ ಬಂದು ೭೮ ವರ್ಷ ಕಳೆದರೂ ಇಂದಿಗೂ ಆದಿ ದ್ರಾವಿಡ ಸಮಾಜದ ಜನಾಂಗವನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆದಿ ದ್ರಾವಿಡ ಸಮಾಜದ ರಾಜ್ಯಾಧ್ಯಕ್ಷ ಎಚ್ ಎಂ ಸೋಮಪ್ಪ ಎಚ್ಚರಿಕೆ ನೀಡಿದ್ದಾರೆ.

ವೀರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ಕೊಡಗು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಲ್ದಾರೆ ಘಟಕದ ನೇತೃತ್ವದಲ್ಲಿ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆದಿ ದ್ರಾವಿಡ ಸಮಾಜ ಬಾಂಧವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರಗಳು ವಿಫಲವಾಗಿದ್ದು ಇಂದಿಗೂ ಮೂಲ ಸೌಲಭ್ಯ ವಂಚಿತರಾಗಿಯೇ ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳಾಗಿದ್ದು ಅಲ್ಲಿನ ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿ ಆದಿ ದ್ರಾವಿಡ ಎಂದು ನಮೂದಿಸಲಾಗಿದೆ. ಹಲವು ವರ್ಷಗಳ ಹಿಂದೆ ಜಿಲ್ಲೆಯಿಂದ ಕೂಲಿ ಕೆಲಸಕ್ಕಾಗಿ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆದಿ ದ್ರಾವಿಡ ಜನಾಂಗದ ಕುಟುಂಬ ನೆಲೆಸಿದ್ದು, ತುಳುಭಾಷಿಕರಾಗಿ ರಾಜ್ಯದಲ್ಲಿ ೧೨ ಲಕ್ಷ ಮಂದಿ ವಾಸವಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಆದಿ ದ್ರಾವಿಡ ಜನಾಂಗದವರನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸಲಾಗುತ್ತಿದ್ದು ಯಾವುದೇ ಮೂಲ ಸೌಲಭ್ಯಗಳಿಲ್ಲದೆ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಜಾಗೃತಿ ಕಾರ್ಯಕ್ರಮದಲ್ಲಿ ಆದಿ ದ್ರಾವಿಡ ಸೇವಾ ಸಮಾಜದ ವೀರಾಜಪೇಟೆ ತಾಲೂಕು ಅಧ್ಯಕ್ಷ ವಿಜಯ, ಕಾರ್ಯದರ್ಶಿ ಲಲಿತ, ಸಲಹೆಗಾರ ರವಿ, ಮಾಲ್ದಾರೆ ಘಟಕದ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಧನಂಜಯ್ ಕುಮಾರ್, ಗೌರವಾಧ್ಯಕ್ಷ ಬಾಬು, ಉಪಾಧ್ಯಕ್ಷ ನಾರಾಯಣ, ಸಹ ಕಾರ್ಯದರ್ಶಿ ಮಂಜುಳಾ, ಶಾಂತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.