ವೀರಾಜಪೇಟೆ, ಸೆ. ೧೭: ವೀರಾಜಪೇಟೆಯ ಮಗ್ಗುಲ ಗ್ರಾಮದ ಲಿಟಲ್ ಸ್ಕಾಲರ್ ಶಾಲೆಯಲ್ಲಿ ವಿಶ್ವಪ್ರಾಣಿ ದಿನ ಆಚರಿಸಲಾಯಿತು. ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುವ ಶಿಕ್ಷಕರ ಸ್ಪೂರ್ತಿದಾಯಕ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬೀದಿಪ್ರಾಣಿಗಳ ದಯೆಯನ್ನು ಎತ್ತಿ ತೋರಿಸುವ ಹೃದಯಸ್ಪರ್ಶಿ ಕಥೆಯಿಂದ ವಿದ್ಯಾರ್ಥಿಗಳು ಆಕರ್ಷಿತರಾದರು.

ವೀರಾಜಪೇಟೆಯ ಪಶುವೈದ್ಯ ಅಧಿಕಾರಿಗಳಾದ ಡಾ. ರಾಕೇಶ್ ಅವರು ಪುಟ್ಟ ಪುಟ್ಟ ಮಕ್ಕಳಿಗೆ ವಿವರಣೆ ನೀಡಿದರು. ಮಕ್ಕಳಿಗೆ ವಿನೂತನ ರೀತಿಯಲ್ಲಿ ಸಾಕು ಪ್ರಾಣಿ, ಪಕ್ಷಿಗಳ, ಪ್ರದರ್ಶನ ಹಾಗೂ ಆ ಪ್ರಾಣಿಗಳ ಚಲನವಲನ, ಯಾವ ಪ್ರಾಣಿಗಳು ಯಾವ ಆಹಾರವನ್ನು ಸೇವಿಸುತ್ತವೆ, ಮಾಂಸಾಹಾರಿ ಪ್ರಾಣಿಗಳು ಯಾವುವು, ಸಸ್ಯಹಾರಿ ಪ್ರಾಣಿಗಳು ಯಾವ ಪ್ರಾಣಿಗಳನ್ನು ಯಾವ ರೀತಿಯಲ್ಲಿ ಎತ್ತಿಕೊಳ್ಳಬೇಕು ಎನ್ನುವ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ತಳಿಯ ನಾಯಿಗಳು, ಬೆಕ್ಕು, ಕೋಳಿ, ಮೊಲ, ಮೀನು, ಹಸು, ಕುದುರೆ, ಆಡು, ಕುರಿಗಳು ಸೇರಿದಂತೆ ಹಲವಾರು ಪ್ರಾಣಿಗಳು ಪ್ರದರ್ಶನದಲ್ಲಿ ಮಕ್ಕಳಿಗೆ ತೋರಿಸುವ ಸಲುವಾಗಿ ಶಾಲೆಯ ಆವರಣದಲ್ಲಿ ಕರೆತಂದು ತೋರಿಸಲಾಯಿತು. ಇದರಲ್ಲಿ ಸಾಕುಪ್ರಾಣಿಗಳು ಯಾವುವು, ಕಾಡು ಪ್ರಾಣಿಗಳು ಯಾವುವು, ಯಾವ ಪ್ರಾಣಿಗಳನ್ನು ಸಾಕಬೇಕು, ಯಾವ ಪ್ರಾಣಿಗಳನ್ನು ಸಾಕಬಾರದು, ಕೆಲವು ಪ್ರಾಣಿಗಳನ್ನು ಅರಣ್ಯ ಇಲಾಖೆಗೆ ಗೊತ್ತಾಗದ ರೀತಿಯಲ್ಲಿ ಸಾಕಿದರೆ ಅಗುವ ಸಮಸ್ಯೆ ಬಗ್ಗೆ ವೈದ್ಯರಾದ ರಾಕೇಶ್ ಮಾಹಿತಿ ನೀಡಿದರು.

ಶಾಲೆಯ ಮುಖ್ಯಸ್ಥರಾದ ಪೂಜಾ ರವೀಂದ್ರ ಮಾತನಾಡಿ ಈ ವಯಸ್ಸಿನಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಮಕ್ಕಳಿಗೆ ಪ್ರೀತಿ ವಿಶ್ವಾಸ ಗಳಿಸಲು ಹಾಗೂ ಪ್ರಾಣಿಗಳ ಮೇಲೆ ಮಕ್ಕಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಗೂ ಪ್ರಾಣಿಗಳಲ್ಲಿ ಇರುವ ವ್ಯತ್ಯಾಸಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಮಾಡಿದ್ದೇವೆ.

ನಮ್ಮ ಶಾಲೆಯಲ್ಲಿ ಪ್ರತಿವರ್ಷವೂ ವಿವಿಧ ರೀತಿಯ ಕಾರ್ಯಕ್ರಮವನ್ನು ನೀಡುತ್ತೇವೆ ಈ ಬಾರಿ ಅಸಲಿ ಪ್ರಾಣಿಗಳನ್ನು ಕರೆಸಿಕೊಂಡು ಮಕ್ಕಳಿಗೆ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.

ಈ ಚಟುವಟಿಕೆಯ ಪ್ರಾಥಮಿಕ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಜಾಗೃತಿಯನ್ನು ಬೆಳೆಸುವುದು, ಇದರಿಂದಾಗಿ ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿಗಳು ವಹಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಅರಿತುಕೊಳ್ಳಲು ಅವರಿಗೆ ಅವಕಾಶ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮೀರ ಪೂಣಚ್ಚ, ಕಾರ್ಯದರ್ಶಿ ಪ್ರತಿಮಾ ರಂಜನ್, ಪ್ರಾಣಿಗಳ ಮಾಲಿಕರು, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.