ಮಡಿಕೇರಿ ಸೆ. ೧೭: ಜಿಲ್ಲೆಯಲ್ಲಿ ಕುಲಾಲ (ಕುಂಬಾರ) ಸಮುದಾಯದ ಮೊದಲ ಮಹಿಳಾ ವಕೀಲರೆಂಬ ಹೆಗ್ಗಳಿಕೆ ಪಾತ್ರರಾಗಿರುವ ಎ. ಮಂಜುಳಾ ಅವರನ್ನು ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ ತಯಾರಕರ ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ನಗರದ ಕೋಟೆ ಮಹಿಳಾ ಸಮಾಜದಲ್ಲಿ ನಡೆದ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ ತಯಾರಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎ. ಮಂಜುಳಾ ಅವರನ್ನು ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಡಿ. ನಾಣಯ್ಯ ಅವರು, ಕುಲಾಲ (ಕುಂಬಾರ) ಸಮುದಾಯದ ಎ. ಮಂಜುಳಾ ಅವರು ಸಮುದಾಯದಿಂದ ಮೊದಲ ವಕೀಲರಾಗಿ ಗುರುತಿಸಿಕೊಂಡಿರುವುದು ಹೆಮ್ಮೆ ಎನಿಸಿದೆ. ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಜನಾಂಗದ ಮಕ್ಕಳಿಗೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಜನಾಂಗ ಬಾಂಧವರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಲಭ್ಯವಾಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣವನ್ನು ಪಡೆಯಬೇಕು. ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಕುಲಾಲ (ಕುಂಬಾರ) ಸಂಘದ ಸ್ಥಾಪಕಾಧ್ಯಕ್ಷರಾದ ಕೆ.ಎಸ್. ಮುತ್ತಮ್ಮ, ಉಪಾಧ್ಯಕ್ಷ ಕೆ.ಕೆ. ದಾಮೋದರ್, ಕಾರ್ಯದರ್ಶಿ ಅರುಣ್ ಕುಮಾರ್, ಹಿರಿಯರಾದ ಮಾಯಿಲಪ್ಪ, ಸಹಕಾರ ಸಂಘದ ಕಾರ್ಯದರ್ಶಿ ದೀನಮಣಿ, ನಿರ್ದೇಶಕರಾದ ಕಾಂತಿಮಣಿ, ಚಿನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಭೆಗೂ ಮೊದಲು ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಭೆಯಲ್ಲಿ ೨೦೨೩-೨೪ನೇ ಸಾಲಿನ ಲೆಕ್ಕಪತ್ರ ಮಂಡನೆ ಮತ್ತು ಅನುಮೋದನೆ, ಷೇರು ಹಣ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು.