ಕೂಡಿಗೆ, ಸೆ. ೧೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ೮ ಜಿಲ್ಲೆಗಳು ಒಳಗೊಂಡ ಕ್ರೀಡಾಕೂಟವು ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆರಂಭಗೊAಡಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ಚಕ್ರವರ್ತಿ ನೆರವೇರಿಸಿ ಮಾತನಾಡಿ, ಕ್ರೀಡೆಯು ಸಾಧಕನಿಗೆ ಸ್ಫೂರ್ತಿಯಾಗುವುದರ ಜೊತೆಯಲ್ಲಿ ಗ್ರಾಮೀಣ ಕ್ರೀಡಾಪಟುಗಳು ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮವಾದ ಅವಕಾಶ ದೊರಕುತ್ತದೆ.

ಮೈಸೂರು ದಸರಾ ಕ್ರೀಡಾಕೂಟವು ರಾಜರ ಆಳ್ವಿಕೆ ಕಾಲದಿಂದಲೂ ಇಂದಿನವರೆಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಯುವಕರು ಒಗ್ಗಟ್ಟಿನ ಮೂಲಕ ಒಗ್ಗೂಡಿ, ಕ್ರೀಡಾ ಕೌಶಲ್ಯವನ್ನು ಮೆರೆಯುವ ಮುಖಾಂತರ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಅಲ್ಲಿಯೂ ಉತ್ತಮವಾದ ಕ್ರೀಡಾ ಪ್ರತಿಭೆಯ ಪ್ರದರ್ಶನ ನೀಡುವ ಮುಖೇನ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕ್ರೀಡೆಯು ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ರೀಡಾಪಟುಗಳು ತೀರ್ಪುಗಾರರ ತೀರ್ಮಾನಕ್ಕೆ ಬದ್ದರಾಗಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಭಾರತದ ಹಾಕಿ ತಂಡದ ಆಟಗಾರ ಶೇಷೇಗೌಡ ಮಾತನಾಡಿ, ಕ್ರೀಡಾ ಕಲಿಕೆಯ ಮೂಲಕ ಗುರಿ, ಛಲವಿದ್ದಲ್ಲಿ ಯಶಸ್ಸು ಕಾಣಲು ಸಾಧ್ಯ. ಉತ್ತಮ ಸಾಧನೆ ಮಾಡಲು ಇಂತಹ ಅವಕಾಶಗಳನ್ನು ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. ಕ್ರೀಡಾಪಟು ಕಠಿಣ ಪರಿಶ್ರಮದ ಮೂಲಕ ತನ್ನ ಸಾಮರ್ಥ್ಯವನ್ನು ಗುರುತಿಸಲು ಅನುಕೂಲವಾಗುವುದು ಎಂದು ತಿಳಿಸಿದರು.

ಕೂಡಿಗೆ ಕ್ರೀಡಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಹಾಕಿ, ಯೋಗಾ, ಜಿಮ್ನಾಸ್ಟಿಕ್ಸ್, ವಿಭಾಗದ ಕ್ರೀಡೆಗಳು ನಡೆದವು. ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ೮ ಜಿಲ್ಲೆಯ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಸಂದರ್ಭ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ಎಂ.ಡಿ. ಮುರುಳಿ, ಕ್ರೀಡಾ ತರಬೇತುದಾರರಾದ ಬಿ.ಎಸ್. ವೆಂಕಟೇಶ, ಬಿಂದಿಯಾ ಗಣಪತಿ, ಸುಬ್ಬಯ್ಯ, ದೀನಾಮಣಿ, ಸುರೇಶ್ ಸೇರಿದಂತೆ ಶಿಕ್ಷಕರ ವೃಂದ, ಸಿಬ್ಬಂದಿ ವರ್ಗದವರು ೮ ಜಿಲ್ಲೆಯ ಕ್ರೀಡಾಪಟುಗಳು ಹಾಜರಿದ್ದರು.