ಮಡಿಕೇರಿ, ಸೆ. ೧೭: ಶ್ರಮಿಕ ವರ್ಗವಾದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರಕಾರ ಹತ್ತು ಹಲವು ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಕಾರ್ಮಿಕರನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಿ ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗೊಳಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೂತನವಾಗಿ ಕಾರ್ಮಿಕರ ಪರ ೩ ಕಾಯಿದೆಗಳನ್ನು ರಾಜ್ಯ ಸರಕಾರ ಜಾರಿ ಮಾಡಿದೆ. ಸಾಮಾಜಿಕ ಜಾಲತಾಣ ವೇದಿಕೆ ಬಳಸಿಕೊಂಡು ವ್ಯಾಪಾರ ಹಾಗೂ ಸರಬರಾಜು ಮಾಡುವ ಗಿಗ್ ಕಾರ್ಮಿಕರಿಗಾಗಿ ಪ್ರತ್ಯೇಕ ಕಾನೂನು ರೂಪಿಸಲಾಗಿದೆ. ಸಿನಿಮಾ ಕಾಯಿದೆಯನ್ನು ರಚಿಸಿ ವಾರ್ಷಿಕ ಮಾರಾಟವಾಗುವ ೪ ಕೋಟಿ ಟಿಕೆಟ್‌ನಿಂದ ಬರುವ ಸೆಸ್ ಹಣವನ್ನು ಕಲಾವಿದರು ಹಾಗೂ ಸಿನಿ ಕಾರ್ಮಿಕರಿಗಾಗಿ ವಿನಿಯೋಗಿಸುವ ಮಹತ್ಕಾರ್ಯವಾಗುತ್ತಿದೆ. ಕರ್ನಾಟಕ ಮೋಟರ್ ಸಾರಿಗೆ ಮತ್ತು ಇತರೆ ಸಂಬAಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಕಾಯಿದೆಯಡಿ ಆಟೋ ರಿಕ್ಷಾ ಚಾಲಕರು, ವಾಹನ ಚಾಲಕರು, ಕ್ಲೀನರ್, ಮೆಕ್ಯಾನಿಕ್ ಸೇರಿದಂತೆ ವಲಯದ ಇತರೆ ಕಾರ್ಮಿಕರು ಅಪಘಾತದಿಂದ ಮೃತಪಟ್ಟಲ್ಲಿ ರೂ. ೫ ಲಕ್ಷ ಹಣ ಕುಟುಂಬಕ್ಕೆ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಈ ಮೊತ್ತವನ್ನು ಹಂತ ಹಂತವಾಗಿ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದರು.
ರಾಜ್ಯದಲ್ಲಿ ಶೇ. ೯೦ ರಷ್ಟು ಕಾರ್ಮಿಕರ ಅಸಂಘಟಿತ ವಲಯಕ್ಕೆ ಸೇರಿರುವ ಹಿನ್ನೆಲೆ ೨೬ ರಿಂದ ೧೦೧ಕ್ಕೆ ವರ್ಗವನ್ನು ಹೆಚ್ಚಿಸಲಾಗಿದೆ. ಇವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ನಾನಾ ಸೌಲಭ್ಯಗಳನ್ನು ಒದಗಿಸಲಾಗುವುದು. ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸೌಲಭ್ಯಗಳನ್ನು ಪಡೆಯಲು ಅವಕಾಶವಿದ್ದು, ಇದರ ಸದ್ಬಳಕೆಗೆ ಕರೆ ನೀಡಿದರು.
ಕಾರ್ಮಿಕರ ಸಂಬಳ ಉದ್ಯೋಗದಾತರಿಗೆ ಮರುಪಾವತಿ
ಎಸ್.ಸಿ., ಎಸ್.ಟಿ. ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಉದ್ಯೋಗದಾತರಿಗೆ ಕಾರ್ಮಿಕರ ಸಂಬಳದ ರೂ. ೬ ಸಾವಿರದಷ್ಟು ಹಣವನ್ನು ಮರುಪಾವತಿ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು.
ಆಶಾದೀಪ ಯೋಜನೆಯಡಿ ಇದನ್ನು ಜಾರಿಗೆ ತಂದಿದ್ದು, ಅರ್ಜಿ ಸಲ್ಲಿಸಿದ್ದಲ್ಲಿ ಸಂಬಳದಲ್ಲಿ ೬ ಸಾವಿರ ಹಣವನ್ನು ಮಾಲೀಕರಿಗೆ ಹಿಂದಿರುಗಿಸಲಾಗುವುದು. ಈ ಮೂಲಕ ಹಿಂದುಳಿದ ಜನಾಂಗದವರಿಗೆ ಉದ್ಯೋಗ ಸೃಷ್ಟಿಯಾದಂತಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂಧನ ಸೆಸ್ ಕಾರ್ಮಿಕರಿಗೆ ಮೀಸಲು
ಇಂಧನ ಮಾರಾಟದ ಮೇಲೆ ವಿಧಿಸಲಾಗುವ ಸೆಸ್ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡಬೇಕೆಂಬ ಚರ್ಚೆ ಸರಕಾರ ಮಟ್ಟದಲ್ಲಿದ್ದು, ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಒತ್ತಡ ಹಾಕುತ್ತಿದ್ದೇನೆ ಎಂದು ಸಂತೋಷ್ ಲಾಡ್ ಹೇಳಿದರು. ಇಂಧನ ಸೆಸ್‌ನಿಂದ ಬರುವ ಹಣ ಕಾರ್ಮಿಕ ಇಲಾಖೆಗೆ ನೀಡಬೇಕು. ಇದನ್ನು ಪೂರ್ಣವಾಗಿ ಕಾರ್ಮಿಕರ ಹಿತಕ್ಕೆ ಬಳಸುವ ಯೋಚನೆ ಇದೆ ಎಂದರು.
ಗ್ಯಾರಂಟಿ ಯೋಜನೆ - ದೇಶಕ್ಕೆ ಮಾದರಿ
ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಇಡೀ ದೇಶಕ್ಕೆ ಮಾದರಿ ಎಂದು ಸಚಿವ ಸಂತೋಷ್ ಲಾಡ್ ಮೆಚ್ಚುಗೆಯ ಮಾತುಗಳನ್ನಾಡಿದರು.
ವಾರ್ಷಿಕ ರೂ. ೬೦ ಸಾವಿರ ಕೋಟಿ ಹಣವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಇದು ನೇರವಾಗಿ ಫಲಾನುಭವಿ ಖಾತೆಗೆ ಸೇರುತ್ತಿದೆ. ದೇಶದ ಯಾವ ರಾಜ್ಯದಲ್ಲಿಯೂ ಈ ರೀತಿ ಕಾರ್ಯಕ್ರಮ ನಡೆದಿಲ್ಲ. ಜನರಿಗೆ ನೀಡುತ್ತಿರುವ ದುಡ್ಡು ಜನರದ್ದೆ ಆಗಿದ್ದು, ಕಾರ್ಮಿಕರ ಪರ ಇರುವ ಸರಕಾರ ಕಾಂಗ್ರೆಸ್ ಮಾತ್ರ. ತಲಾದಾಯದಲ್ಲಿ ಕರ್ನಾಟಕ ದೇಶಕ್ಕೆ ಮೊದಲ ಸ್ಥಾನದಲ್ಲಿದೆ ಎಂದರು.
ನಿವೇಶನ ಒದಗಿಸಲು ಪ್ರಯತ್ನ
ಕೊಡಗು ಜಿಲ್ಲೆಯಲ್ಲಿರುವ ಕಾರ್ಮಿಕರ ಪೈಕಿ ವಿಶೇಷವಾಗಿ ತೋಟ ಕಾರ್ಮಿಕರಿಗೆ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಹಲವು ವರ್ಷಗಳಿಂದ ತೋಟಗಳಲ್ಲಿ ಕೆಲಸ ಮಾಡುತ್ತ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ೬೦ ವರ್ಷ ದಾಟಿದ ನಂತರ ಅಸ್ಥಿರತೆ ಕಾಡುತ್ತದೆ. ಸೂಕ್ತ ನೆಲೆ ಇಲ್ಲದೆ ಅಭದ್ರತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ನಿವೇಶನದೊಂದಿಗೆ ವಸತಿ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಜಾಗದ ಕೊರತೆಯೂ ಜಿಲ್ಲೆಯಲ್ಲಿದ್ದು, ೧೫ ಸಾವಿರಕ್ಕೂ ಹೆಚ್ಚು ನಿವೇಶನ ರಹಿತರಿದ್ದಾರೆ ಎಂದರು.
ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ೩೩ ಕೋಟಿ ವೆಚ್ಚದ ವಸತಿ ಶಾಲೆ ಕೊಡಗು ಜಿಲ್ಲೆಗೆ ಕಾರ್ಮಿಕ ಸಚಿವರು ನೀಡಿದ್ದಾರೆ. ಗಿಗ್ ಕಾರ್ಮಿಕರಿಗಾಗಿ ಮತ್ತಷ್ಟು ಯೋಜನೆ ನೀಡಬೇಕು. ಕಾರ್ಮಿಕ ಇಲಾಖೆ ಯೋಜನೆಯನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು. ದೊರೆತವರಿಗೆ ಮತ್ತೊಮ್ಮೆ ಸವಲತ್ತು ದೊರೆಯಬಾರದು. ಈ ರೀತಿ ಆದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬದ್ಧತೆಯ ಕಾರ್ಯಕ್ರಮ
ಕಾರ್ಮಿಕರನ್ನು ಮೇಲೆತ್ತುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು ಬದ್ಧತೆಯಿಂದ ಕೂಡಿವೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ವಿಶ್ಲೇಷಿಸಿದರು.
೨೬ ಅಸಂಘಟಿತ ವರ್ಗವನ್ನು ೧೦೧ಕ್ಕೆ ಹೆಚ್ಚಿಸಿರುವುದು ಸಾಮಾನ್ಯದ ಮಾತಲ್ಲ. ಇದು ದೊಡ್ಡ ಸಾಧನೆಯಾಗಿದೆ. ಇದನ್ನು ಪ್ರತಿಯೊಬ್ಬರು ಶ್ಲಾಘಿಸಬೇಕು. ಪರಿಶಿಷ್ಟ ವರ್ಗದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವವರಿಗೆ ಸಂಬಳದ ಮೊತ್ತದಲ್ಲಿ ಒಂದಷ್ಟು ಮೊತ್ತವನ್ನು ಸರಕಾರ ಭರಿಸುತ್ತಿರುವುದರಿಂದ ಪರಿಶಿಷ್ಟ ವರ್ಗದವರಿಗೆ ಉದ್ಯೋಗ ಸೃಷ್ಟಿಯಾಗಿ ಸ್ವಾವಲಂಬಿಯಾಗುತ್ತಾರೆ. ಸ್ಮಾರ್ಟ್ ಕಾರ್ಡ್ ವಿತರಣೆಯಿಂದ ಕಾರ್ಮಿಕರು ಆರೋಗ್ಯ ಸಮಸ್ಯೆ ಎದುರಿಸಿದ ಸಂದರ್ಭ ಚಿಕಿತ್ಸೆಗೆ ಪ್ರಯೋಜನವಾಗುತ್ತದೆ. ಇದು ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ದೇಶದ ಎಲ್ಲಿಯೂ ಕಾರ್ಮಿಕರಿಗೆ ಇಂತಹ ಬದ್ಧತೆ ಕಾರ್ಯಕ್ರಮ ನಡೆದಿಲ್ಲ. ಅಸಂಘಟಿತ ವಲಯವನ್ನು ವಿಸ್ತರಿಸಿ ಉದ್ದೀಪನಗೊಳಿಸುವ ಕೆಲಸವಾಗುತ್ತಿದೆ. ಸಮಾನತೆಯನ್ನು ಕಲ್ಪಿಸುವ ಕೆಲಸವನ್ನು ಕಾರ್ಮಿಕ ಸಚಿವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾತನಾಡಿ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸಿದ್ಧಾಂತದ ಮೇಲೆ ಕರ್ನಾಟಕ ಸರಕಾರ ನಿಂತಿದೆ. ಶೋಷಿತರ, ದುರ್ಬಲರ, ಹಿಂದುಳಿದವರ ಪರ ಕೆಲಸ ಮಾಡುತ್ತಿದೆ. ೫ ಗ್ಯಾರಂಟಿ ಯೋಜನೆಗೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಮಹಿಳೆಯರ ಸಬಲೀಕರಣದೊಂದಿಗೆ ಶಕ್ತಿ ತುಂಬುವ ಕೆಲಸದ ಉದ್ದೇಶದಿಂದ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಾಗಿದ್ದು ಜಿ.ಎಸ್.ಟಿ., ಮಹಿಳಾ ಉದ್ಯಮ, ಜಿಡಿಪಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಸಂತೋಷ್ ಲಾಡ್ ಅವರು ರೂಪಿಸಿದ ಕಾರ್ಮಿಕ ಕಾಯಿದೆ ಪರಿಣಾಮಕಾರಿಯಾಗಿದ್ದು, ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕಾರ್ಮಿಕ ದೇಶ ಕಟ್ಟುವುದರಲ್ಲಿ ಮೊದಲಿಗರಾಗಿರುತ್ತಾರೆ ಎಂದರು.
ಸಾಮಾಜಿಕ ಭದ್ರತೆ ನೀಡುವ ಕೆಲಸ
ಜಂಟಿ ಕಾರ್ಮಿಕ ಆಯುಕ್ತ ಡಾ.ಎಸ್.ಬಿ. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ೨೫ ವಿಧದ ಕಾರ್ಮಿಕ ಕಾಯಿದೆ ಅನುಷ್ಠಾನ ಮಾಡುವ ಮಹತ್ವದ ಇಲಾಖೆ ಕಾರ್ಮಿಕ ಇಲಾಖೆಯಾಗಿದೆ. ಕಾನೂನಾತ್ಮಕ ರಕ್ಷಣೆ ನೀಡುವ ಕೆಲಸವಾಗುತ್ತದೆ. ಕಾಯಿದೆಗಳ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಭದ್ರತೆ ನೀಡುವ ಕೆಲಸವೂ ನಡೆಯುತ್ತಿದೆ. ಕಾರ್ಮಿಕ ಸಚಿವರು ೧೮ ಜಿಲ್ಲೆ ಪ್ರವಾಸ ಕೈಗೊಂಡು ಕಾರ್ಮಿಕರ ನೋವು-ನಲಿವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಾಮಾಜಿಕ ಭದ್ರತೆ ಇಲ್ಲದವರು ಅಸಂಘಟಿತ ಕಾರ್ಮಿಕರಾಗುತ್ತಾರೆ. ಇವರನ್ನು ಒಂದೆಡೆ ಸೇರಿಸಲು ಅಂಬೇಡ್ಕರ್ ಸಹಾಯಹಸ್ತ ಯೋಜನೆ ರೂಪಿಸಿ ೧೦೧ ವರ್ಗವನ್ನು ಸೇರಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಂಘಟಿಸಿ ಸೌಲಭ್ಯ ತಲುಪಿಸುವ ಸದುದ್ದೇಶವನ್ನು ಹೊಂದಲಾಗಿದೆ. ಕಾರ್ಮಿಕ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ರೂ. ೧ ಲಕ್ಷ, ಚಿಕಿತ್ಸೆಗೆ ರೂ. ೫೦ ಸಾವಿರ ಸರಕಾರ ನೀಡುತ್ತದೆ. ಗಿಗ್ ಕಾರ್ಮಿಕರಿಗಾಗಿಯೂ ಪ್ರತ್ಯೇಕ ಕಾನೂನು ತಂದಿರುವುದು ಹೆಗ್ಗಳಿಕೆಯಾಗಿದೆ. ಆಶಾದೀಪ ಯೋಜನೆ ಮೂಲಕ ಎಸ್.ಸಿ., ಎಸ್.ಟಿ. ವರ್ಗದವರಿಗೆ ಉದ್ಯೋಗ ಕಲ್ಪಿಸುವ ಉದ್ಯೋಗದಾತರಿಗೆ ಹಣ ನೀಡುವ ಕೆಲಸವಾಗಿದೆ ಎಂದರು.
ಸ್ಮಾರ್ಟ್ ಕಾರ್ಡ್ - ಸೌಲಭ್ಯ ವಿತರಣೆ
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿವಿಧ ವಲಯಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು. ಇದರೊಂದಿಗೆ ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ರೂ. ೫ ಲಕ್ಷ ಪರಿಹಾರ, ಅಂಗಾAಗ ದಾನ ಮಾಡಿದ ಈಶ್ವರ್ ಎಂಬವರ ಕುಟುಂಬಕ್ಕೆ ರೂ. ೫ ಲಕ್ಷ, ಅಪಘಾತದಲ್ಲಿ ಮೃತಪಟ್ಟ ಚಾಲಕರ ಮಕ್ಕಳ ಶಿಕ್ಷಣಕ್ಕೆ ರೂ. ೧೦ ಸಾವಿರ ಆರ್ಥಿಕ ನೆರವಿನ ಚೆಕ್ ಅನ್ನು ಸಚಿವ ಸಂತೋಷ್ ಲಾಡ್ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಕೊಡಗು ಉಪವಿಭಾಗ ಕಾರ್ಮಿಕ ಅಧಿಕಾರಿ ಟಿ. ಕಾವೇರಿ, ಹಿರಿಯ ಕಾರ್ಮಿಕ ನಿರೀಕ್ಷಕ ಎಂ. ಯತ್ನಟ್ಟಿ, ಎಸ್. ಶ್ರೀಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಗಿರೀಶ್ ಮತ್ತು ತಂಡ ನಾಡ ಗೀತೆ ಹಾಡಿತು. ಹಾಸನ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಹೆಚ್.ಎಲ್. ಗುರುಪ್ರಸಾದ್ ಸ್ವಾಗತಿಸಿ, ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ್ ವಂದಿಸಿದರು.