ಸೋಮವಾರಪೇಟೆ, ಸೆ. ೧೪: ಸಮೀಪದ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಶತಮಾನೋತ್ಸವ ಆಚರಣಾ ಸಮಿತಿ, ಶಾಲಾಭಿವೃದ್ಧಿ ಸಮಿತಿ ವತಿಯಿಂದ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿರುವ ಬಯಲು ಸಭಾಂಗಣದಲ್ಲಿ ಜರುಗಿದ ಸ್ಮರಣ ಸಂಚಿಕೆ ಹಂಚಿಕೆ, ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಶತಮಾನ ಪೂರೈಸಿದ ಶಾಂತಳ್ಳಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ನೂತನವಾಗಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ತೆರೆದಿದ್ದು, ಶತಮಾನೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಇದೀಗ ಶತಮಾನೋತ್ಸವದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆ ವಿತರಣೆ, ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ, ಸರ್ಕಾರಿ ಶಾಲೆಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಿದ ಮಹನೀಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಹಾಗೂ ಶತಮಾನೋತ್ಸವ ಸಮಿತಿ ಹಮ್ಮಿಕೊಂಡಿದ್ದು, ಗ್ರಾಮಸ್ಥರು ಹಾಗೂ ಪೋಷಕರು, ವಿದ್ಯಾರ್ಥಿಗಳ ಸಮ್ಮಿಲನದೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಅವರ ಪೌರೋಹಿತ್ವದಲ್ಲಿ, ಶಾಲೆಯ ಆವರಣದಲ್ಲಿರುವ ಸರಸ್ವತಿ ಪ್ರತಿಮೆಗೆ ಮಾಲಾರ್ಪಣೆ, ಅಕ್ಷತೆ ಅರ್ಪಣೆ, ಪೂಜೆಯೊಂದಿಗೆ ಆರಂಭಗೊAಡ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಂಪನ್ನಗೊAಡಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವ ಸಮಿತಿ ಹಾಗೂ ಪೂರ್ವ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಮಾತನಾಡಿ, ಯಾವುದೇ ಜವಾಬ್ದಾರಿ ಸ್ವೀಕರಿಸಿದರೂ ಪ್ರಾಮಾಣಿಕವಾಗಿ ನಿಭಾಯಿಸಬೇಕು. ದಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಸರ್ಕಾರಿ ಶಾಲಾ ಶತಮಾನೋತ್ಸವ ಸಮಾರಂಭ ನೆರವೇರಿಸಿದ್ದು, ಸರ್ಕಾರಿ ಶಾಲೆಗಳ ಉಳಿವಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಅನಿವಾರ್ಯವಾಗಿದೆ ಎಂಬುದನ್ನು ಅರಿತು ಶಾಂತಳ್ಳಿಯಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭಿಸಲಾಗಿದೆ ಎಂದರು.
ಸರ್ಕಾರಿ ಶಾಲೆಯ ಶತಮಾನೋತ್ಸವ, ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಆರಂಭಕ್ಕೆ ಸಹಕರಿಸಿದ ದಾನಿಗಳ ಸಹಕಾರ ಸ್ಮರಣೀಯ ಎಂದು ಮೇದಪ್ಪ ಅಭಿಪ್ರಾಯಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಪರಮೇಶ್ವರ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾತೃ ಭಾಷೆಯಾಗಿ ಕನ್ನಡಕ್ಕೆ ಅಗ್ರ ಸ್ಥಾನ ನೀಡಲೇಬೇಕಿದೆ. ಆದರೆ ವ್ಯಾವಹಾರಿಕ ಭಾಷೆಯಾಗಿ ಇಂಗ್ಲೀಷ್ ಕಲಿಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಉಡುಪಿಯ ಮಹೇಶ್ ಶೆಣೈ ಅವರು, ಸಮಾಜದ ಋಣವನ್ನು ಸಮಾಜಮುಖಿ ಕಾರ್ಯಗಳ ಮೂಲಕ ತೀರಿಸಬೇಕು. ಹಾಗಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು.
ವೇದಿಕೆಯಲ್ಲಿ ಸಮಿತಿ ಗೌರವಾಧ್ಯಕ್ಷ ಕೆ.ಎಸ್. ರಾಮಚಂದ್ರ, ಕೆ.ಟಿ. ರಾಜಶೇಖರ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್, ಸಮಿತಿಯ ಉಪಾಧ್ಯಕ್ಷ ಮನೋಹರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಸಿ. ಗುರುಪ್ರಸಾದ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಡಿ. ಬಸವರಾಜು, ಶಾಲಾ ಸಮಿತಿ ಕಾರ್ಯದರ್ಶಿ ಪ್ರೇಮ್‌ಸಾಗರ್, ಹಿರಿಯ ಸಾಹಿತಿ ಜಲಾ ಕಾಳಪ್ಪ, ಜಿ.ಪಂ. ಅಭಿಯಂತರ ವೀರೇಂದ್ರ, ಜಿ.ಪಂ. ಮಾಜಿ ಸದಸ್ಯ ಹೆಚ್.ಎಸ್. ವೆಂಕಪ್ಪ, ನಿವೃತ್ತ ಶಿಕ್ಷಕ ಚಾವಾಡಿಮನೆ ಶಿವಕುಮಾರ್, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ್ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಲಾ ಕಾಳಪ್ಪ ಅವರು ರಚಿಸಿರುವ ‘ಇತಿಹಾಸ ಪ್ರಸಿದ್ಧ ಶಾಂತಳ್ಳಿ ವೈಭವ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಇದರೊಂದಿಗೆ ಗ್ರಾಮದ ಮಾಜಿ ಸೈನಿಕರು, ಶಾಲಾ ಸ್ಥಾಪನೆಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತç ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಚಂದನ್ ಹಾಗೂ ಹರ್ಷ ಪ್ರಾರ್ಥಿಸಿ, ಶಿಕ್ಷಕಿ ಜಯಮ್ಮ ಸ್ವಾಗತಿಸಿ ವಂದಿಸಿದರು. ಸಹ ಶಿಕ್ಷಕ ಬಿ.ಎ. ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.