ಕೂಡಿಗೆ. ಸೆ. ೧೪: ವನ್ಯಜೀವಿಗಳ ಜೊತೆ ಸಹಬಾಳ್ವೆಯಿರಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು..
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವಿಷಪೂರಿತ ಹಾವುಗಳು ಮತ್ತು ಗುರುತಿಸುವಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಷಪೂರಿತ ಹಾವುಗಳ ಬಗ್ಗೆ ಮಾಹಿತಿ, ಹಾವುಗಳನ್ನು ಹಿಡಿಯುವ ಸಲಕರಣೆಗಳು, ಹಾವುಗಳು ಬರದಂತೆ ತಡೆಯುವುದು, ಆಹಾರ, ಪ್ರಥಮ ಚಿಕಿತ್ಸೆ, ಅಪನಂಬಿಕೆಗಳು, ರೈತಸ್ನೇಹಿ ಹಾವುಗಳು, ಇತ್ಯಾದಿ ವಿಷಯದ ಬಗ್ಗೆ ತಜ್ಞರು ನೀಡುವಂತಹ ಮಾಹಿತಿಯನ್ನು ಈ ತರಬೇತಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಪಡೆದುಕೊಂಡು ಇತರರಿಗೂ ತಿಳಿಸುವಂತೆ ಸಲಹೆ ನೀಡುತ್ತಾ, ಹಾವುಗಳೆಂದ ತಕ್ಷಣ ಭಯ ಹೆದರಿಕೆ ಬೇಡ ಆತಂಕಪಡುವ ಅವಶ್ಯಕತೆಯಿಲ್ಲ. ಭಯದಲ್ಲಿ ಶಾಂತ ಸ್ವಭಾವದ ಏಕಾಂತ ಬಯಸುವ ಹಗೆತನವಿಲ್ಲದ ನಾಚಿಕೆ ಸ್ವಭಾವದ ಹಾವುಗಳು ರೈತಸ್ನೇಹಿ. ಅವುಗಳನ್ನು ಕೊಲ್ಲದೆ ನೈಸರ್ಗಿಕ ಜೈವಿಕ ಸಮತೋಲನೆಗೆ ನಾವು ಸಹಕಾರಿಯಾಗಬೇಕು” ಹಾವು ಕಚ್ಚಿದ ಗುರುತು ಮೈಮೇಲೆ ಕಂಡಾಗ ಶಾಂತವಾಗಿ ಪ್ರಥಮ ಚಿಕೆತ್ಸೆಯೊಂದಿಗೆ ಆಧುನಿಕ ಸೌಲಭ್ಯದ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆಯಿರಿ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಲಿಂಗರಾಜು ದೊಡ್ಡಮನಿ ಮಾತನಾಡುತ್ತಾ ಎಲ್ಲಾ ಕಡೆ ಹಾವಿನ ವಿಷಕ್ಕೆ ಔಷಧಿ ದೊರೆಯುತ್ತಿದೆ. ಸಾರ್ವಜನಿಕರು ತಡ ಅಥವಾ ನಿರ್ಲಕ್ಷ್ಯ ಮಾಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಉಪನಿರ್ದೇಶಕ ಡಾ. ಕೆ.ಬಿ. ಚಿದಾನಂದ ಅವರು ಮಾತನಾಡಿ, ವಿಷಪೂರಿತ ಹಾವು ಉತ್ಪಾದಿಸುವ ವಿಷವು ಕೇವಲ ಪರಿವರ್ತಿತ ಜೊಲ್ಲು ಇದು ಮನುಷ್ಯನ ದೇಹ ಸಂಪರ್ಕ ಬಂದಾಗ ಮಾತ್ರ ನರಗಳ ವ್ಯೂಹದ ಮೇಲೆ, ರಕ್ತದ ಮೇಲೆ ಸ್ನಾಯುಗಳ ಮೇಲೆ ಹಾನಿಕಾರಕ ಉಂಟುಮಾಡಿ ವಿಷಕಾರಿಯಾಗುತ್ತದೆ. ಮಂಡಲದ ಹಾವು, ಕಟ್ಟು ಹಾವು, ನಾಗರ ಹಾವು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಪಶುಸಂಗೋಪನೆಯಲ್ಲಿ ಹಾವುಗಳ ಬಗ್ಗೆ ಮೂಢನಂಬಿಕೆಯನ್ನು ತೆಗೆಯಬೇಕು ಎಂದು ತಿಳಿಸಿದರು. ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಂ.ಸಿ. ಶಿವಕುಮಾರ್ ಅವರು ಮಾತನಾಡಿ, ಈಗಾಗಲೇ ಭಾರತ ಸರ್ಕಾರದ ರಾಷ್ಟಿçÃಯ ಆರೋಗ್ಯ ಯೋಜನೆಯಂತೆ ಹಾವುಗಳ ಕಡಿತದಿಂದ ಸಾವಿನ ಪ್ರಮಾಣವನ್ನು ಮುಂದಿನ ಕೆಲವು ವರ್ಷದೊಳಗೆ ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿದೆ. ರೈತರು ಕಾಲಿಗೆ ಕವಚಗಳು, ಹೊಲ-ಗದ್ದೆಗಳನ್ನು ಮನೆ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಂಸ್ಥೆಯಿAದ ಹಲವಾರು ವನ್ಯಜೀವಿಗಳ ಬಗ್ಗೆ ಹಾವಿನ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಪಶುವೈದ್ಯಾಧಿಕಾರಿ ಡಾ. ಶ್ರೀದೇವುರ ಮಾತನಾಡಿ, ಹಾವಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಅಲ್ಲದೆ ರೈತರಲ್ಲಿದ್ದ ಅಪನಂಬಿಕೆ, ಪ್ರಥಮ ಚಿಕಿತ್ಸೆ, ಪ್ರತಿಬಂದಕಗಳು ವೈದ್ಯಕೀಯ ಸೌಲಭ್ಯ ದ ಬಗ್ಗೆ ವಿವರಿಸಿದರು ರೈತರಲ್ಲಿದ್ದ ಹಲವಾರು ಆತಂಕಗಳನ್ನು ಬಗೆಹರಿಸಿದರು ಹಾಗೂ ವಿಷಪೂರಿತ ಹಾವುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ಒದಗಿಸಿದರು.ಉರಗಪ್ರೇಮಿ ಪುಷ್ಪಾಧರ (ಸ್ನೇಕ್ ಶಾಜಿ) ಹಾವುಗಳ ಬಗ್ಗೆ ಎಚ್ಚರಿಕೆಯ ಕ್ರಮಗಳು ಅಲ್ಲದೇ ಹಾವು ಕಂಡ ತಕ್ಷಣ ಕರೆ ಮಾಡುವಂತೆ ಸೂಕ್ಷ್ಮವಾಗಿ ಅಡಗಿರುವ ಜಾಗ ಗಮನಿಸಿ ವಿಷಯ ಮುಟ್ಟಿಸಲು ತಿಳಿಸಿದರು.
ಅದೇ ಸಮಯದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳು ಎಲ್ಲಾ ಸಾರ್ವಜನಿಕರು ಈ ತಿಂಗಳ ೨೨ನೇ ತಾರೀಖಿನಿಂದ ಪ್ರಾರಂಭವಾಗುವ ಶೈಕ್ಷಣಿಕ ಗಣತಿಯಲ್ಲಿ ಭಾಗವಹಿಸಲು ಕರೆ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ರೇಬಿಸ್ ವಿರುದ್ಧ ತಮ್ಮ ಸಾಕು ಪ್ರಾಣಿಗಳಿಗೆ ಉಚಿತವಾಗಿ ದೊರೆಯುವ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಉಪನಿರ್ದೇಶಕರು ಮನವಿ ಮಾಡಿದರು. ತರಬೇತಿಗೆ ೮೦ಕ್ಕೂ ಹೆಚ್ಚು ರೈತರು, ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿ ಕುಮಾರಿ ಚೈತ್ರ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಪ್ರಶಾಂತ ಎಲ್ಲರನ್ನೂ ಸ್ವಾಗತಿಸಿದರು, ಉಪನ್ಯಾಸಕ ಡಾ. ಜಮೀರ್ ಅಹಮದ್ ವಂದನಾರ್ಪಣೆ ನೆರವೇರಿಸಿದರು.