ಮಡಿಕೇರಿ, ಸೆ. ೧೪: ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ಕೊಡಗಿನ ಗೌರಮ್ಮ ಹೆಸರಿನಲ್ಲಿ ಗೋಕರ್ಣದ ಹವ್ಯಕ ಮಹಾಮಂಡಲದಲ್ಲಿ ಸ್ಥಾಪಿಸಲಾಗಿರುವ ಸಣ್ಣಕತೆಗಳ ದತ್ತಿ ಪ್ರಶಸ್ತಿ, ಈ ಬಾರಿ ಕೊಡಗು ಮೂಲದ ಲೇಖಕಿ ಭಾರತಿ ಕೊಡ್ವಕೆರೆ ಅವರ ಮಡಿಗೇರಿದೆ.

ಕೊಡಗಿನ ವೀರಾಜಪೇಟೆ ಸಮೀಪದ ಕೋಟೆಕೊಪ್ಪಲಿನ ಮೂಟೇರಿ ಆರ್. ಗಂಗಾಧರ ಮತ್ತು ಎಂ.ಜಿ. ಸಾವಿತ್ರಿಯವರ ಪುತ್ರಿ, ಕಾಸರಗೋಡಿನ ಕೇಶವ ಪ್ರಸಾದ್ ಅವರ ಪತ್ನಿ ಭಾರತಿ ಕೊಡ್ವಕೆರೆ ಅವರು ಬರೆದಿರುವ ಸಣ್ಣ ಕಥೆ ‘ದಿನಚರಿ ಪುಸ್ತಕ ರಹಸ್ಯ’ಕ್ಕೆ ಹವ್ಯಕ ಮಹಾಮಂಡಲದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ದೊರಕಿದೆ.

ಮಹಿಳಾ ಬರಹಗಾರರ ಉತ್ತೇಜನಕ್ಕೆ ದತ್ತಿ: ಹವ್ಯಕ ಮಹಾ ಮಂಡಲದಲ್ಲಿ ಕೊಡಗಿನ ಗೌರಮ್ಮ ಅವರ ದತ್ತಿಯನ್ನು ಯುವ ಬರಹಗಾರರ ಉತ್ತೇಜನಕ್ಕಾಗಿ ಸ್ಥಾಪಿಸಲಾಗಿದೆ. ಈ ದತ್ತಿ ನಿಧಿಯ ಮೂಲಕ ವರ್ಷಂಪ್ರತಿ ಹವ್ಯಕ ಮಹಿಳಾ ಬರಹಗಾರರಿಗೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿ ಭಾರತಿ ಕೊಡ್ವಕೆರೆ ಅವರಿಗೆ ಸಂದಿದೆ.

ಎಳವೆಯಲ್ಲೇ ಸಾಹಿತ್ಯದತ್ತ ಅತೀವ ಆಸಕ್ತಿ ಹೊಂದಿದ್ದ ಭಾರತಿ ಕೊಡ್ವಕೆರೆ ಅವರು, ಅಂದಿನ ದಿನಗಳಲ್ಲೇ ಸ್ಥಳೀಯ ಪತ್ರಿಕೆಗಳಿಗೆ ಕಥೆ, ಲೇಖನಗಳನ್ನು ಬರೆಯುತ್ತಿದ್ದವರು. ಕೇಶವ ಪ್ರಸಾದ್‌ರನ್ನು ವಿವಾಹವಾಗಿ ಕಾಸರಗೋಡಿನಲ್ಲಿ ನೆಲೆಸಿರುವ ಭಾರತಿ ಕೊಡ್ವಕೆರೆ ಅವರು, ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇಲ್ಲಿಯವರೆಗೆ ಇವರು ಒಂದು ಕಥಾಸಂಕಲನ, ಸುಪ್ರಭಾತ, ಅನ್ನಪೂರ್ಣ, ಸಿರಿಬಾಗಿಲು ಎನ್ನುವ ಮೂರು ಕಾದಂಬರಿಗಳನ್ನು ರಚಿಸಿದ್ದಾರೆ. ಪತಿ ಕೇಶವ ಪ್ರಸಾದ್, ಮಕ್ಕಳಾದ ನಿಸರ್ಗ, ಸೌರಭ ಇವರುಗಳ ನಿರಂತರ ಪ್ರೋತ್ಸಾಹ ಸಾಹಿತ್ಯ ಸೇವೆಗೆ ಸ್ಫೂರ್ತಿ ಎನ್ನುತ್ತಾರೆ ಭಾರತಿ ಕೊಡ್ವಕೆರೆ.