ಕೂಡಿಗೆ, ಸೆ. ೧೪: ಬಹುದಿನಗಳ ಬೇಡಿಕೆಯಾಗಿದ್ದ ಕಣಿವೆ-ಮಸಗೋಡು ರಸ್ತೆಯ ಕಾಮಗಾರಿಗೆ ಈಗಾಗಲೇ ಸರಕಾರದಿಂದ ಅನುಮೋದನೆ ದೊರೆತಿದ್ದು ಮುಂದಿನ ದಿನಗಳಲ್ಲಿ ರೂ. ೧೫ ಕೋಟಿ ವೆಚ್ಚದ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತÀರ್ ಗೌಡ ಕೂಡಿಗೆಯಲ್ಲಿ ತಿಳಿಸಿದ್ದಾರೆ.

ರೂ. ೧೫ ಕೋಟಿ ವೆಚ್ಚದ ಕಾಮಗಾರಿಗೆ ಇಲಾಖೆಯ ನಿಯಮಾನುಸಾರ ಹಣಕಾಸು ಇಲಾಖೆಯ ವತಿಯಿಂದ ಅನುಮೋದನೆ ದೊರೆತಿದ್ದು, ಕ್ರಿಯಾ ಯೋಜನೆ ಅನುಷ್ಠಾನಗೊಂಡು ಟೆಂಡರ್ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲಿ ಕಣಿವೆ- ಮಸಗೋಡು ಸೋಮವಾರಪೇಟೆ ಸಂಪರ್ಕ ರಸ್ತೆಯ ಕಾಮಗಾರಿ ಆರಂಭಗೊಳ್ಳಲಿದೆ.

ಈ ರಸ್ತೆ ಕಾಮಗಾರಿಯಲ್ಲಿ ಕಿರು ಸೇತುವೆಯ ನಿರ್ಮಾಣದ ಅವಶ್ಯಕತೆ ಇರುವುದರಿಂದ ಹೆಚ್ಚುವರಿಯಾಗಿ ರೂ. ೩ ಕೋಟಿಯ ಅನುದಾನ ಬೇಕಿರುವ ಹಿನ್ನೆಲೆ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ಹೆಚ್ಚುವರಿಯಾಗಿ ರೂ. ೩ ಕೋಟಿ ಅನುದಾನವನ್ನು ನೀಡುವ ಭರವಸೆಯನ್ನು ಲೋಕೋಪಯೋಗಿ ಸಚಿವರು ನೀಡಿದ್ದಾರೆ. ಅವರ ನೇತೃತ್ವದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಇದರ ಜೊತೆಯಲ್ಲಿ ಸೀಗೆಹೊಸೂರು ಗ್ರಾಮದ ವಿವಿಧ ಹಾಡಿಗಳಿಗೆ ತೆರಳುವ ಗ್ರಾಮಾಂತರ ರಸ್ತೆಯ ಕಾಮಗಾರಿಗಳೂ ಸಹ ಚಾಲನೆಗೊಳ್ಳಲಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು. ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ, ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಅನಂತ, ಅರುಣ್ ರಾವ್, ಶಿವಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್. ಕುಮಾರ್, ಇಂಜಿನಿಯರ್ ಆಬಾರ್ಜ್ ಹಾಗೂ ಗ್ರಾಮಸ್ಥರು ಇದ್ದರು.