ಕಣಿವೆ, ಸೆ. ೧೪: ಬದುಕಿನ ಸತ್ಯವನ್ನು ವಚನ ರೂಪದಲ್ಲಿ ತೆರೆದಿಟ್ಟ ಮಹಾನ್ ಚೇತನ ವಿಶ್ವಗುರು ಬಸವಣ್ಣ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಕುಶಾಲನಗರ ತಾಲೂಕಿನ ತೊರೆನೂರು ಶ್ರೀ ವಿರಕ್ತಮಠದಲ್ಲಿ ಮಾಸಿಕ ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ಚಿಂತನಾಗೋಷ್ಠಿಯಲ್ಲಿ ಪ್ರವಚನ ನೀಡಿದ ಅವರು, ಶರಣರ ಚಿಂತನೆಗಳು ಸದಾ ಕಾಲಕ್ಕೂ ಸರ್ವಹಿತ ಎಂದರು. ಅಂತಹ ಶರಣರ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಉಪಕಾರಿಯಾದವರು ಸುತ್ತೂರಿನ ೨೩ನೇ ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು ಎಂದು ಮಾಹಿತಿ ಇತ್ತರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಅದೆಂತಹ ಅಡೆತಡೆಗಳು ಬಂದರೂ ಕೂಡ ಸಮಾಧಾನಿಯಾಗಿರಬೇಕು ಎಂಬುದನ್ನು ಅಕ್ಕಮಹಾದೇವಿ ತನ್ನ ವಚನದಲ್ಲಿ ಬೋಧಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಸ್ಕಾರವನ್ನು ರೂಢಿಸಿಕೊಂಡು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಲು ಮಹಾತ್ಮರ ಜಯಂತಿ ಪೂರಕವಾಗಿವೆ. ತಂದೆ ತಾಯಿಗಳು ಸಂಸ್ಕಾರವAತರಾದರೆ ಮಕ್ಕಳು ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಾರೆ ಎಂದರು.

ಕೆ.ಆರ್. ನಗರ ಅರಕೆರೆ ವಿರಕ್ತಮಠದ ಶ್ರೀ ಸಿದ್ಧೇಶ್ವರಸ್ವಾಮಿಗಳು ಆಶೀರ್ವಚನ ನೀಡಿ ಇಂದು ಮಾನವರು ಸಂಸಾರ ಬಂಧನದಲ್ಲಿ ಸಿಲುಕಿ ಸಂಸ್ಕಾರ ಕಣ್ಮರೆಯಾಗುತ್ತಿದೆ. ಶಿವಾನುಭವ ಗೋಷ್ಠಿಗಳು ಶಿವತ್ವವನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು. ಇದೇ ಸಂದರ್ಭ ಕುಶಾಲನಗರದ ಕೆನರಾ ಬ್ಯಾಂಕ್ ಕೃಷಿ ವಿಸ್ತರಣಾ ಅಧಿಕಾರಿ ಲೌಕಿಕ್ ಮತ್ತು ದಾಸೋಹಿ ಎಚ್.ಆರ್ ಶಿವಕುಮಾರ್ ಅವರನ್ನು ಗೌರವಿಸಲಾಯಿತು.

ಕೊಡಗು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶತಾಯುಷಿ ಮರೂರು ಗ್ರಾಮದ ಹೆಚ್.ವಿ. ಶಿವರುದ್ರಪ್ಪ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರೇಮ್‌ಕುಮಾರ್, ಕೊಡಗು ಜಿಲ್ಲಾ ಶ.ಸಾ.ಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಖಜಾಂಚಿ ಎಚ್.ಪಿ ಉದಯ್ ಕುಮಾರ್, ನಿರ್ದೇಶಕ ಗಣೇಶ್, ಶಿಕ್ಷಕ ಬಸವರಾಜು ಇತರರು ಉಪಸ್ಥಿತರಿದ್ದರು.