ಕೂಡಿಗೆ, ಸೆ. ೧೪: ಕೂಡಿಗೆ ಸೈನಿಕ ಶಾಲೆಯ ೨೯ನೇ ಸ್ಥಳೀಯ ಆಡಳಿತ ಮಂಡಳಿ (ಎಲ್.ಬಿ.ಎ) ಸಭೆ ಶಾಲಾವರಣದಲ್ಲಿ ನಡೆಯಿತು. ಸಭೆಯಲ್ಲಿ ಕೂಡಿಗೆ ಸೈನಿಕ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯುದ್ಧವೀರರ ಸ್ಮಾರಕದ ಆವರಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಧ್ವಜ ಸ್ತಂಭವನ್ನು ಆಡಳಿತ ಮಂಡಳಿಯ ಅಧ್ಯಕ್ಷರು ಉದ್ಘಾಟಿಸಿದರು. ಇದರೊಂದಿಗೆ ಶಾಲೆಯ ಪರೇಡ್ ಮೈದಾನದಲ್ಲಿ ವಿದ್ಯಾರ್ಥಿಗಳು ನೀಡಿದ ಗಾರ್ಡ್ ಆಫ್ ಹಾನರ್ನ ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭ ಶಾಲೆಯ ವಾರ್ಷಿಕ ಸಂಚಿಕೆಯಾದ ‘ಕೊಡಗಿಯನ್’ ಅನ್ನು ಬಿಡುಗಡೆಗೊಳಿಸಲಾಯಿತು. ಹಾಗೆಯೇ ಶಾಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಿಜ್ಞಾನ ವಿಷಯ ಶಿಕ್ಷಕರಾದ ಎನ್. ಸುಬ್ಬರಂಗಯ್ಯ ಹಾಗೂ ದಾದಾಧರೆಪ್ಪ ಕುಸನಾಳೆ ಅವರುಗಳನ್ನು ಸನ್ಮಾನಿಸಲಾಯಿತು.
ನಂತರ ಅಖಿಲ ಭಾರತ ಸೈನಿಕ ಶಾಲೆಗಳ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.
ನಂತರ ಮಾತನಾಡಿದ ಬಿಜೊ ಅವರು, ಸೈನಿಕ ಶಾಲೆ ಕೊಡಗು ಹದಿನೇಳು ವರ್ಷಗಳ ಹಿಂದೆ ಭವಿಷ್ಯದ ಸೈನಿಕ ಅಧಿಕಾರಿಗಳನ್ನು ನಿರ್ಮಿಸುವ ಮಹೋನ್ನತ ದೃಷ್ಟಿಕೋನದೊಂದಿಗೆ ಸ್ಥಾಪಿತವಾಗಿದ್ದು, ಇಂದು ತನ್ನ ಸಾಮರ್ಥ್ಯ ಮತ್ತು ಗೌರವವನ್ನು ವೃದ್ಧಿಸಿಕೊಂಡು ಗಣನೀಯ ಬೆಳವಣಿಗೆಯನ್ನು ಕಂಡಿದೆ ಎಂದರು.
ವಿಶೇಷ ಸಭೆಯ ನಂತರ ಆಸಕ್ತ ಎನ್ಡಿಎ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾಗಿ ಕುವೆಂಪು ವಿವಿಧೋದ್ಧೇಶ ಸಭಾಂಗಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ “ಶಿಖರ್” ಎಂಬ ಹೆಸರಿನ ಹೊಸ ತರಗತಿ ಕೊಠಡಿಯನ್ನು ಹಾಗೂ ಆಡಳಿತ ಮಂಡಳಿಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ರೋಬೋಟಿಕ್ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೇರ್ ಆಡ್ಮಿರಲ್ ಆರ್.ಎಂ. ಪುರಂದರೆ ವಿ.ಎಸ್.ಎಂ (ನಿವೃತ್ತ), ಎಲಿಜಾ ಮೆಮನ್ ಹಾಗೂ ದಿವ್ಯಾಸಿಂಗ್ ಹಾಜರಿದ್ದರು.
ಸಭೆಯಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಜಿಲ್ಲಾಧಿಕಾರಿ ವೆಂಕಟ ರಾಜಾ, ಪ್ರತಿನಿಧಿಯಾಗಿ ಸಹಾಯಕ ಆಯುಕ್ತರಾದ ನಿತಿನ್ ಚಕ್ಕಿ, ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರಾದ ಡಾ. ಎಂ.ಪಿ. ಸದಾಶಿವ, ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಪ್ರತಿನಿಧಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಎನ್ ಪುಷ್ಟ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರದ್ಯುಮ್ನ ಕುಮಾರ್ ಸೇಥಿ, ಮೈಸೂರಿನ ಸಿ.ಪಿ ಡಬ್ಲ್ಯೂ.ಡಿ.ಯ ಅಭಿಯಂತರರಾದ ಅಮೋಲ್ ನಾಮ್ ದೇವ್, ಪೋಷಕ ಪ್ರತಿನಿಧಿಯಾದ ಸಂಪತ್ ಕುಮಾರ್ ಶರ್ಮಾ, ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲರು ಹಾಗೂ ಸಭೆಯ ಕಾರ್ಯದರ್ಶಿಗಳಾದ ಕರ್ನಲ್ ಅಮರ್ ಜೀತ್ ಸಿಂಗ್ ಕಳೆದ ಆರು ತಿಂಗಳಲ್ಲಿ ಶಾಲೆಯ ತರಬೇತಿ ಮತ್ತು ಆಡಳಿತಾತ್ಮಕ ಪ್ರಗತಿಯ ಕುರಿತು ವಿವರಿಸುವುದರೊಂದಿಗೆ ಶಾಲೆಯು ಸಾಧಿಸಿದ ಸಾಧನೆಗಳ ಕುರಿತು ವಿವರಿಸಿದರು. ಹಾಗೆಯೇ ಭವಿಷ್ಯದ ದಿನಗಳಲ್ಲಿ ಶಾಲೆಯು ಹಮ್ಮಿಕೊಂಡಿರುವ ಶೈಕ್ಷಣಿಕ ಹಾಗೂ ಆಡಳಿತ ಕ್ರಮವನ್ನು ವಿವರಿಸಿದರು.