ಭಾಗಮಂಡಲ, ಸೆ. ೧೩: ೨೦೨೪-೨೫ರ ಸಾಲಿನಲ್ಲಿ ಪ್ರಗತಿಪರ ಜೇನು ಕೃಷಿಕರ ಸಂಘವು ರೂ. ೬೨.೮೧ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಯಮಿತ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಕಳೆದ ೨೫ ವರ್ಷಗಳಿಂದ ೧೦ ಲಕ್ಷಕ್ಕೂ ಮೇಲ್ಪಟ್ಟು ಹಾಗೂ ಕಳೆದ ಹತ್ತು ವರ್ಷಗಳಿಂದ ೪೦ ಲಕ್ಷಕ್ಕೂ ಮೇಲ್ಪಟ್ಟು ಲಾಭಗಳಿಸಿ ಅಭಿವೃದ್ಧಿಯತ್ತ ಸಾಗುತಿದೆ ಎಂದರು. ಸಂಘದಲ್ಲಿ ೧೨೧೦ ಸದಸ್ಯರಿದ್ದು ಪಾಲು ಬಂಡವಾಳ ರೂ. ೨೧ ಲಕ್ಷದ ೧೫ ಸಾವಿರಗಳಾಗಿವೆ. ಸದಸ್ಯರಿಗೆ ಕಳೆದ ೨೧ ವರ್ಷಗಳಿಂದ ಶೇ. ೨೫ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ. ೧೦೬೬ ಮಂದಿ ಮರಣ ನಿಧಿ ಸದಸ್ಯತ್ವ ಪಡೆದುಕೊಂಡಿದ್ದು, ೨೦೨೪-೨೫ರ ಸಾಲಿನಲ್ಲಿ ೧೨ ಜನ ಸದಸ್ಯರು ಮೃತಪಟ್ಟಿದ್ದು ವಾರಿಸುದಾರರಿಗೆ ೧,೫೫,೦೦೦ ಪಾವತಿಸಲಾಗಿದೆ. ೨೦೨೪- ೨೫ರ ಸಾಲಿನಲ್ಲಿ ೧೧.೪೨ ಲಕ್ಷ ರೂ. ಠೇವಣಿ ಹಾಗೂ ೭೯೧. ೮೭ ಲಕ್ಷ ರೂ.ಧನ ವಿನಿಯೋಗ ಮಾಡಲಾಗಿದೆ ಎಂದರು. ಸಂಘದಲ್ಲಿ ಸದಸ್ಯರು ಖರೀದಿಸುವ ಜೇನುಪೆಟ್ಟಿಗೆ ಒಂದಕ್ಕೆ ೬೦೦ನಂತೆ ಎರಡು ಪೆಟ್ಟಿಗೆಗೆ ರಿಯಾಯಿತಿ ನೀಡಲಾಗುತ್ತಿದ್ದು ೨೦೨೪-೨೫ ರ ಸಾಲಿನಲ್ಲಿ ೬೩,೦೦೦ ರಿಯಾಯಿತಿ ನೀಡಲಾಗಿದೆ. ಸದಸ್ಯರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಮೂರು ಜನ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ ಮೂರು ವಿಭಾಗಗಳಲ್ಲಿ ತಲಾ ಎರಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗಿದೆ. ಸಂಘದ ಮುಖ್ಯ ಕಚೇರಿ ಹಾಗೂ ಶಾಖೆಗಳಲ್ಲಿ ಪ್ಲಾಸ್ಟಿಕ್ ಹಾಗೂ ಕೃಷಿ ಉಪಕರಣ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಮುಖ್ಯ ಕಚೇರಿಯಲ್ಲಿ ಕೋವಿ ತೋಟಾ ಮಾರಾಟಕ್ಕೆ ಲಭ್ಯವಿರುತ್ತದೆ. ಸಂಘದಲ್ಲಿ ಜೇನು ಕೃಷಿಕರಿಗೆ ಕೆ.ಜಿ. ಒಂದಕ್ಕೆ ೫೦ ರೂಪಾಯಿಯಂತೆ ಬೋನಸ್ ನೀಡಲಾಗುತ್ತದೆ. ಸಂಘದಲ್ಲಿ ಖಾಯಂ ನೌಕರರ ಆರೋಗ್ಯ ದೃಷ್ಟಿಯಿಂದ ಗುಂಪು ವಿಮೆ ಅಳವಡಿಸಲಾಗಿದ್ದು, ವಾರ್ಷಿಕ ವಿಮಾ ಮೊತ್ತ ೫ ಲಕ್ಷ ಆಗಿದ್ದು, ವಾರ್ಷಿಕ ಪ್ರೀಮಿಯಂ ಒಂದು ಲಕ್ಷದ ಎಪ್ಪತ್ತೆಂಟು ಸಾವಿರ ರೂಪಾಯಿ ಪಾವತಿಸಲಾಗಿದೆ. ೨೦೨೪-೨೫ರ ಸಾಲಿನಲ್ಲಿ ಈ ಸ್ಟ್ಯಾಂಪಿAಗ್‌ನಲ್ಲಿ ೪,೨೧,೪೯೮ ವ್ಯವಹಾರ ಮಾಡಲಾಗಿದೆ. ಸಂಘದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕೊಡಗು ಡಿಸಿಸಿ ಬ್ಯಾಂಕ್ ಒಂದೂವರೆ ಲಕ್ಷ ರೂಪಾಯಿ ಸಹಾಯಧನ ನೀಡಿದೆ ಎಂದು ಸತೀಶ್ ಕುಮಾರ್ ವಿವರಿಸಿದರು. ಖಾದಿ ಗ್ರಾಮೋದ್ಯೋಗ ಅಧಿಕಾರಿ ರಾಮಕೃಷ್ಣ, ಸಂಘದ ಉಪಾಧ್ಯಕ್ಷ ದಿನೇಶ್ ಅಯ್ಯಣಿರ, ಕಾರ್ಯನಿರ್ವಹಣಾಧಿಕಾರಿ ಸುಧಾ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.